ಕಾಸರಗೋಡು: ಕೋವಿಡ್ ನ ಮೂರನೇ ಅಲೆ ಹರಡದಂತೆ ಮಾಡಲು ಕಾಸರಗೋಡು ಜಿಲ್ಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಜನಜಾಗೃತಿ ಅಭಿಯಾನ ಆರಂಭಗೊಂಡಿದೆ.
ಜಿಲ್ಲಾ ಮಟ್ಟದ ಐ.ಇ.ಸಿ. ಸಂಚಲನ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಟಾಗ್ ಲೈನ್ ಘೋಷಿಸಿದರು. ಮೊದಲ ಮತ್ತು ದ್ವಿತೀಯ ಅಲೆಯ ಸಂಕಷ್ಟಗಳನ್ನು ಎದುರಿಸಿರುವ ನಮ್ಮ ಸಮಾಜ ಇನ್ನೂ ಒಂದು ಅಲೆಯ ದುಸ್ಥಿತಿಯನ್ನು ಎದುರಿಸದಂತೆ ಅತೀವ ಜಾಗರೂಕತೆ ಪಾಲಿಸಬೇಕು ಎಂದು ಸಭೆ ಆದೇಶಿಸಿದೆ.
ವೈಜ್ಞಾನಿಕವಾಗಿ ಪ್ರತಿರೋಧ ಚಟುವಟಿಕೆಗಳಾಗಿರುವ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸಾಬೂನು ಯಾ ಸಾನಿಟೈಸರ್ ಬಳಸಿ ಆಗಾಗ ಕೈತೊಳೆಯುವಿಕೆ ಸಹಿತ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶೈಕ್ಷಣಿಕ ವರ್ಷ ಆರಂಭಗೊಂಡಿದ್ದರೂ ಮಾಸ್ಟರ್ ಯೋಜನೆ ಕೋವಿಡ್ ಪ್ರತಿರೋಧ ಅಂಗವಾಗಿ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಉಪನಿರ್ದೇಶಕಿ ಅವರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಮಂಜೇಶ್ವರ, ಕಾಸರಗೋಡು ತಾಲೂಕುಗಳಲ್ಲಿ ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಣ ನಿಟ್ಟಿನಲ್ಲಿ ತುಳು ಭಾಷೆಯಲ್ಲಿ ಜನಜಾಗೃತಿ ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕೇರಳ ತುಳು ಅಕಾಡೆಮಿ, ಆರೋಗ್ಯ ಇಲಾಖೆಯ ಮಾಸ್ ಮೀಡಿಯಾ ವಿಭಾಗ, ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿಗಳಿಗೆ ಹೊಣೆ ನೀಡಲಾಗಿದೆ.
ಕೋವಿಡ್ ವಾಕ್ಸಿನ್ ಸುರಕ್ಷಿತವಾಗಿದೆ ಎಂಬ ವಿಚಾರದಲ್ಲಿ ಪ್ರಚಾರ ಚುರುಕುಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರತಿದಿನ 55 ವಾರ್ಡ್ ಗಳಲ್ಲಿ ವಾಡೊರ್ಂದರಲ್ಲಿ ತಲಾ 75 ಮಂದಿಯ ಕೋವಿಡ್ ತಪಾಸಣೆ ನಡೆಸುವ ಕೋವಿಡ್ ಕೋರ್ ಸಮಿತಿಯ ತೀರ್ಮಾನದೊಂದಿಗೆ ಎಲ್ಲರೂ ಸಹಕರಿಸುವಂತೆ ಆದೇಶಿಸಲಾಗಿದೆ.
ಸಮಿತಿ ಸಂಚಾಲಕ , ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ವರದಿ ವಾಚಿಸಿದರು. ಹೆಚ್ಚುವರಿ ದಂಡನಾಧಿಕಾರಿ ಅತುಲ್ ಸ್ವಾಮಿನಾಥ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಮೀನಾರಾಣಿ, ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಸಾಜು, ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ಸಯನಾ, ಮಾಸ್ಟರ್ ಯೋಜನೆಯ ಜಿಲ್ಲಾ ಸಂಚಾಲಕ ಪಿ.ದಿಲೀಪ್ ಕುಮಾರ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಶುಚಿತ್ವ ಮಿಷನ್ ಸಹಾಯಕ ಸಂಚಾಲಕ ಪ್ರೇಮರಾಜನ್, ಕೆ.ಎಸ್.ಎಸ್.ಎಂ. ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಐ.ಪಿ.ಆರ್.ಡಿ. ಸಹಾಯಕ ಸಂಪಾದಕ ಪಿ.ಪಿ.ವಿನೀಷ್, ಐ.ಸಿ.ಡಿ.ಎಸ್. ಪ್ರಧಾನ ಲೆಕ್ಕಾಧಿಕಾರಿ ರಜೀಷ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.