ಭೋಪಾಲ: ಮಧ್ಯಪ್ರದೇಶದ ದಂಪತಿ ತಮ್ಮ ತೋಟದಲ್ಲಿ ಬೆಳೆದ ಮಿಯಾಸಾಕಿ ಮಾವಿನ ಹಣ್ಣಿನ ಭದ್ರತೆಗೆ 4 ಭದ್ರತಾ ಸಿಬ್ಬಂದಿ ಹಾಗೂ 6 ಕಾವಲುನಾಯಿಗಳನ್ನು ನಿಯೋಜಿಸಿದ್ದಾರೆ. ಯಾಕೆಂದರೆ ಈ ತಳಿಯ ಮಾವಿನಹಣ್ಣು ವಿಶ್ವದ ದುಬಾರಿ ಹಣ್ಣು ಎಂಬ ದಾಖಲೆಗೆ ಪಾತ್ರವಾಗಿದೆ.
ಸಂಕಲ್ಪ್ ಪರಿಹಾರ್ ಮತ್ತವರ ಪತ್ನಿ ರಾಣಿ ತಮ್ಮ ತೋಟದಲ್ಲಿ ನೆಟ್ಟಿರುವ ಮಾವಿನ ಹಣ್ಣಿನ ಗಿಡ ಇಷ್ಟೊಂದು ಬೆಲೆಬಾಳುವ ಹಣ್ಣನ್ನು ನೀಡುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಕ್ಕಿಲ್ಲ. 1 ಕಿ.ಗ್ರಾಂ ಮಿಯಾಸಕಿ ಮಾವಿನ ಹಣ್ಣಿಗೆ ಮುಂಬೈಯ ಗ್ರಾಹಕರೊಬ್ಬರು 21,000 ರೂ. ಬೆಲೆಕಟ್ಟಿದ್ದಾರೆ ಎಂದು ದಂಪತಿ ಹೇಳಿದ್ದಾರೆ.
ಕಳೆದ ವರ್ಷ ಜಪಾನ್ ಮೂಲದ ಈ ಅಸಾಮಾನ್ಯ ಮಾವಿನಹಣ್ಣಿನ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕಿ.ಗ್ರಾಂಗೆ 2.70 ಲಕ್ಷ ರೂ. ಆಗಿತ್ತು. ಕಡುಗೆಂಪು ಬಣ್ಣ ಮತ್ತು ಆಕಾರದಿಂದಾಗಿ ಈ ಮಾವಿನಹಣ್ಣಿಗೆ ಬಿಸಿಲಿನ ಮೊಟ್ಟೆ ಎಂಬ ಅಡ್ಡಹೆಸರೂ ಇದೆ. ಈ ಮಾವಿನಹಣ್ಣಿನ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆಯೇ ಮಾವಿನಹಣ್ಣು ಕದಿಯುವ ಪ್ರಯತ್ನ ಹಲ ಬಾರಿ ನಡೆದಿದೆ. ಒಂದು ಮಾವಿನ ಹಣ್ಣಿನ ತೂಕ ಸರಾಸರಿ 350 ಗ್ರಾಂ ಆಗಿದ್ದು ಬಿ.ವಿಟಮಿನ್ ಸಹಿತ ಪೌಷ್ಟಿಕಾಂಶಗಳು ಹೇರಳವಾಗಿವೆ. ಜಪಾನ್ ನ ಒಂದು ಊರಿನ ಹೆಸರು ಈ ಮಾವಿನಹಣ್ಣಿಗೆ ಇಡಲಾಗಿದೆ.