ಬೆಂಗಳೂರು: ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕನ್ನಡಿಗರು ತಿರುಗಿಬಿದ್ದಿದ್ದು ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್ ಸಂಸ್ಥೆ ಕ್ಷಮೆಯಾಚಿಸಿದೆ.
ಸಚಿವ ಅರವಿಂದ್ ಲಿಂಬಾವಳಿ ಸೇರಿದಂತೆ ರಾಜಕೀಯ ನಾಯಕರು, ಕನ್ನಡಿಗರು ಗೂಗಲ್ ವಿರುದ್ಧ ಕಿಡಿಕಾರಿದ್ದರು. ವ್ಯಾಪಕ ಟೀಕೆ ವ್ಯಕ್ತವಾಗಿದ್ದರಿಂದ ಇದೀಗ ಗೂಗಲ್ ತನ್ನ ಪುಟದಿಂದ "ಭಾರತದ ಅತ್ಯಂತ ಕೊಳಕು ಭಾಷೆ ಕನ್ನಡ ಎಂಬುದನ್ನು ತೆಗೆದುಹಾಕಿದೆ. ಅಲ್ಲದೆ ಹುಡುಕಾಟ ಫಲಿತಾಂಶವು ತನ್ನ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಜನರಿಗೆ ಕ್ಷಮೆಯಾಚಿಸಿದೆ.
ಭಾರತದ ಕೆಟ್ಟ ಭಾಷೆ ಯಾವುದು ಎಂದು ನೆಟ್ಟಿಗರು ಗೂಗಲ್ ನಲ್ಲಿ ಸರ್ಜ್ ಮಾಡಿದರೆ ಕನ್ನಡ ಎಂಬ ಉತ್ತರ ಬರುತಿತ್ತು. ಇದನ್ನು ತೀವ್ರವಾಗಿ ಖಂಡಿಸಿದ್ದ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ, ಗೂಗಲ್ ಆಗಲಿ, ಬೇರೆ ಯಾರೇ ಆಗಲಿ ಕನ್ನಡ ಭಾಷೆ ಬಗ್ಗೆ ಗೌರವಿಲ್ಲದೆ ವರ್ತಿಸಿದರೆ ಅಥವಾ ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಭಾರತದ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಪಡೆದಿರುವ ಭಾಷೆ ಬಗ್ಗೆ ಕೀಳಾಗಿ ಮಾತನಾಡುವುದನ್ನು ಸಹಿಸಲಾಗುವುದು ಎಂದಿದ್ದಾರೆ. ಈ ಮಧ್ಯೆ ಕನ್ನಡವೊಂದೇ ಅಲ್ಲ, ಯಾವ ಭಾಷೆಯೂ ಕೆಟ್ಟ, ಕುರೂಪವಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದರು.
ಭಾಷೆ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಭಾಷೆ ವಿರುದ್ಧ ನಿಂದನೆ ಬಹಳ ನೋವಿನದ್ದು. ಹೀಗಾಗಿ ಈ ವಿಚಾರದಲ್ಲಿ ಗೂಗಲ್ ಸೂಕ್ಷ್ಮವಾಗಿರಬೇಕು. ಕನ್ನಡವನ್ನು ಅವಹೇಳನ ಮಾಡಿದ್ದ ವೆಬ್‌ಪುಟ ಡಿಲಿಟ್ ಆಗಿರಬಹುದು. ಆದರೆ, ಅದರಿಂದ ಕನ್ನಡಿಗರಿಗಾದ ನೋವಿಗೇನು ಪರಿಹಾರ? ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ. ಭಾಷೆ ವಿಚಾರದಲ್ಲಿ ಯಾರೇ ಅದರೂ ಇನ್ನು ಮುಂದೆ ಎಚ್ಚರವಾಗಿರಬೇಕು. ಅದರಲ್ಲೂ ಕನ್ನಡದ ವಿಚಾರದಲ್ಲಂತೂ ಎಲ್ಲರೂ ಎರಡು ಪಟ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ಒಂದೇ ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ, ಮರುಗಳಿಗೆಯಲ್ಲಿ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.