ನವದೆಹಲಿ: ಕೊರೊನಾ ಹೊಸ ರೂಪಾಂತರದ ವಿರುದ್ಧ "ಬೂಸ್ಟರ್ ಶಾಟ್" ಪ್ರಯೋಗವನ್ನು ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಭಾನುವಾರ ಆರಂಭಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಬೆಟಾ ರೂಪಾಂತರದ ವಿರುದ್ಧ ಬೂಸ್ಟರ್ ಶಾಟ್ (ಮೂರನೇ ಡೋಸ್ ಲಸಿಕೆ) ಪರೀಕ್ಷೆಗೆ ಹೊಸ ಪ್ರಯೋಗ ಆರಂಭಿಸಿದೆ. ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬ್ರಿಟನ್ ಹಾಗೂ ಪೋಲೆಂಡ್‌ನ ಸುಮಾರು 2250 ಮಂದಿಯನ್ನು ಈ ಪ್ರಯೋಗ ಒಳಗೊಂಡಿದೆ.
ಎರಡು ಡೋಸ್ ಆಕ್ಸ್‌ಫರ್ಡ್ -ಆಸ್ಟ್ರಾಜೆನೆಕಾ ಲಸಿಕೆ ಪಡೆದವರನ್ನು ಹಾಗೂ ಫೈಜರ್‌ನಂಥ ಎಂಆರ್‌ಎನ್‌ಎ ಲಸಿಕೆ ಪಡೆದವರನ್ನು ಹಾಗೂ ಲಸಿಕೆಯನ್ನೇ ಪಡೆದವರನ್ನು ಈ ಅಧ್ಯಯನ ಒಳಗೊಂಡಿದ್ದು, ಇವರ ಮೇಲೆ ಮೂರನೇ ಡೋಸ್ ಲಸಿಕೆ ಪ್ರಯೋಗ ನಡೆಯುತ್ತಿದೆ.
ಆಸ್ಟ್ರಾಜೆನೆಕಾ ಇದಕ್ಕಾಗಿ AZD2816 ಎಂಬ ಹೊಸ ಲಸಿಕೆ ಅಭಿವೃದ್ಧಿಪಡಿಸಿದೆ. ಆಸ್ಟ್ರಾಜೆನೆಕಾ ಮೂಲ ಲಸಿಕೆಯಂತೆ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಕೆಲವು ಆನುವಂಶಿಕ ಬದಲಾವಣೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
"ಈಗಿರುವ ಕೊರೊನಾ ಲಸಿಕೆಗಳ ಬೂಸ್ಟರ್ ಡೋಸ್‌ಗಳ ಪರೀಕ್ಷೆ ಮಾಡುವುದು ಈಗ ಅವಶ್ಯಕವಾಗಿದೆ. ಹೊಸ ರೂಪಾಂತರಗಳು ಸೃಷ್ಟಿಯಾಗುತ್ತಿರುವ ಈ ಸಮಯದಲ್ಲಿ ಲಸಿಕೆಯ ಹಲವು ಆಯ್ಕೆಗಳೊಂದಿಗೆ ಸಿದ್ಧವಿರುವುದು ಮುಖ್ಯ. ಹೀಗಾಗಿ ಬೂಸ್ಟರ್ ಡೋಸ್ ಪ್ರಯೋಗ ನಡೆಸಲಾಗುತ್ತಿದೆ" ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿ ಆಕ್ಸ್‌ಫರ್ಡ್ ಲಸಿಕಾ ತಂಡದ ನಿರ್ದೇಶಕ ಆಂಡ್ರ್ಯೂ ಪೊಲ್ಲಾರ್ಡ್ ತಿಳಿಸಿದ್ದಾರೆ.
"ಹೊಸ ಕೊರೊನಾ ರೂಪಾಂತರಗಳ ವಿರುದ್ಧ ಇನ್ನೊಂದು ಡೋಸ್ ಅಧಿಕ ಲಸಿಕೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಅಧ್ಯಯನ ಸಹಾಯ ಮಾಡುತ್ತದೆ" ಎಂದು ಆಕ್ಸ್‌ಫರ್ಡ್ ಲಸಿಕಾ ತಂಡದ ಪ್ರಮುಖ ತಜ್ಞ ಮಹೇಶಿ ರಾಮಸಾಮಿ ತಿಳಿಸಿದ್ದಾರೆ.
ಬೆಟಾ ರೂಪಾಂತರ, ಡೆಲ್ಟಾ ರೂಪಾಂತರಗಳ ವಿರುದ್ಧ ಈಗ ಲಭ್ಯವಿರುವ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದಂತೆ "ಬೂಸ್ಟರ್ ಶಾಟ್" ಪ್ರಯೋಗ ಆರಂಭವಾಗಿದೆ.