ಅಹಮದಾಬಾದ್: ಕೋವಿಡ್‌ನಿಂದ ಸತ್ತವರ ಶವಗಳು ಗಂಗಾ ನದಿಯಲ್ಲಿ ತೇಲುತ್ತಿದ್ದುದ್ದರ ಕುರಿತು ಗುಜರಾತಿ ಕವಯತ್ರಿ ಪಾರೂಲ್ ಖಾಖರ್ ಅವರು ರಚಿಸಿದ್ದ ಕವಿತೆಯನ್ನು ಗುಜರಾತ್ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಷ್ಣು ಪಾಂಡ್ಯ ಅವರು ಟೀಕಿಸಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಉದಾರವಾದಿಗಳು, ಕಮ್ಯುನಿಸ್ಟರು ಮತ್ತು ಸಾಹಿತ್ಯ ನಕ್ಸಲರು ಕವತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಗಂಗಾನದಿಯಲ್ಲಿ ಶವಗಳು ತೇಲಿದ ಪ್ರಸಂಗದ ಹಿನ್ನೆಲೆಯನ್ನು ಇಟ್ಟುಕೊಂಡು ಕವಯತ್ರಿ ಪಾರೂಲ್ ಖಾಖರ್ ಅವರು ತಮ್ಮ ಕವಿತೆ "ಶಬ್ ವಾಹಿನಿ ಗಂಗಾ"ದಲ್ಲಿ ಕೇಂದ್ರ ಸರ್ಕಾರ ಕೋವಿಡ್ ನಿಭಾಯಿಸಿದ ರೀತಿಯನ್ನು ವಿಮರ್ಶಿಸಿದ್ದರು.
ಈ ಕವಿತೆಗೆ ಹಲವು ಸಾಹಿತಿಗಳು ಬೆಂಬಲ ಸೂಚಿಸಿದ್ದಾರೆ. ಕವಿತೆಯ ವಿರುದ್ಧ ಮಾತನಾಡುತ್ತಿರುವ ಪಾಂಡ್ಯ ಅವರ ನಿಲುವನ್ನೂ ಟೀಕಿಸಿದ್ದಾರೆ. ಆದರೂ ಪಾಂಡ್ಯ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ. ಈ ಕವಿತೆಯು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸುತ್ತಿದೆ ಮತ್ತು ಭಾರತೀಯರು, ಪ್ರಜಾಪ್ರಭುತ್ವ ಮತ್ತು ಭಾರತೀಯ ಸಮಾಜದ ಮಾನಹಾನಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕವಿತೆಯು ಅತ್ಯಂತ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಗಳಿಸಿದ್ದು, ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.
ಗುಜರಾತ್ ಸಾಹಿತ್ಯ ಅಕಾಡೆಮಿಯ ನಿಯತಕಾಲಿಕೆ "ಶಬ್ದಸೃಷ್ಟಿ" ಯ ಜೂನ್ ಆವೃತ್ತಿಯಲ್ಲಿನ ಸಂಪಾದಕೀಯದಲ್ಲಿ, ಅಕಾಡೆಮಿ ಅಧ್ಯಕ್ಷ ಪಾಂಡ್ಯ ಅವರು ಈ ಕವಿತೆಯನ್ನು ಹೆಸರಿಸದೇ ಟೀಕಿಸಿದ್ದರು. "ಇಲ್ಲ, ಇದು ಕವಿತೆಯಲ್ಲ, ಇದು ಅರಾಜಕತೆಗೆ ಕವಿತೆಯ ದುರುಪಯೋಗ,' ಎಂದು ಶೀರ್ಷಿಕೆ ನೀಡಲಾಗಿತ್ತು.
"ಅನೇಕರು ಈ ಕವಿತೆಯನ್ನು ಹೊಗಳಿದ್ದಾರೆ. ಆದರೆ ಈ ತುಣುಕನ್ನು ಕವಿತೆಯೆಂದು ಪರಿಗಣಿಸಲಾಗುವುದಿಲ್ಲ. ಅದು ಕೇವಲ ಅರ್ಥಹೀನ ಕೋಪ, ಪದಗಳ ಕೌಶಲ. ಭಾರತೀಯರನ್ನು, ನಮ್ಮ ಪ್ರಜಾಪ್ರಭುತ್ವ ಮತ್ತು ಸಮಾಜವನ್ನು ಇದು ಕೆಣಕುತ್ತಿದೆ. ಇದನ್ನು ನೀವು ಹೇಗೆ ಕವಿತೆ ಎಂದು ಕರೆಯಬಹುದು?' ಎಂದು ಪಾಂಡ್ಯ ಕಿಡಿ ಕಾರಿದ್ದರು.
'ಈ ಕವಿತೆಯನ್ನು ಕೇಂದ್ರದ ವಿರೋಧಿಗಳು ಮತ್ತು ರಾಷ್ಟ್ರವಾದಿ ಸಿದ್ಧಾಂತಗಳ ವಿರೋಧಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಕಮ್ಯುನಿಸ್ಟರು ಮತ್ತು ಉದಾರವಾದಿಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಯಸುತ್ತಾರೆ. ಅವರು ದುರುದ್ದೇಶದಿಂದ ಸಾಹಿತ್ಯದತ್ತ ಹೊರಳಿದ್ದಾರೆ. ಸಾಹಿತ್ಯ ನಕ್ಸಲರು ಇದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಕವಿತೆಯನ್ನು ಅಕಾಡೆಮಿ ಎಂದಿಗೂ ಒಪ್ಪುವುದಿಲ್ಲ,' ಎಂದು ಪಾಂಡ್ಯ ಅವರು ಹೇಳಿದ್ದಾರೆ.
'ಶಬ್ ವಾಹಿನಿ ಗಂಗಾ' ಕವಿತೆ ವಿರುದ್ಧ ಮಾತನಾಡುತ್ತಿರುವ ಗುಜರಾತ್ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ವಿರುದ್ಧ ಸಾಹಿತಿಗಳು ದೊಡ್ಡ ಮಟ್ಟದಲ್ಲಿ ತಿರುಗಿಬಿದ್ದಿದ್ದಾರೆ. ಪಾಂಡ್ಯ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ. ಬರಹಗಾರರ ಧ್ವನಿ ಅಡಗಿಸುವ ತಂತ್ರವಿದು ಎಂದೂ ಆರೋಪಿಸಿದ್ದಾರೆ.