ನವದೆಹಲಿ: ಭಾರತ ಸೇರಿದಂತೆ ವಿಶ್ವದ ಇತರ ದೇಶಗಳಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ಶೋಷಣೆಯಿಂದಾಗಿ ನೈಸರ್ಗಿಕ ಪ್ರದೇಶಗಳು ಮತ್ತು ಜೀವವೈವಿಧ್ಯತೆಗೆ ಕುತ್ತು ಎದುರಾಗಿದೆ. ಇದರ ಫಲಿತಾಂಶವಾಗಿ ಕೋವಿಡ್ ಸಾಂಕ್ರಾಮಿಕ ರೋಗ ವಿಶ್ವವನ್ನು ಕಾಡುತ್ತಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ಭಾರತದ ಮುಖ್ಯಸ್ಥ ಅತುಲ್ ಬಾಗಿ ಹೇಳಿದ್ದಾರೆ.
ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಮತ್ತು ಅದರ ನಾಶವನ್ನು ತಡೆಯಲು ಭಾರತ ಸೇರಿದಂತೆ ಜಗತ್ತಿನ ಎಲ್ಲ ದೇಶಗಳು ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
'ನಮ್ಮ ಇಡೀ ಗ್ರಹವು ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯ ಮತ್ತು ಜೀವವೈವಿಧ್ಯತೆ ನಶಿಸುತ್ತಿರುವ ಬಿಕ್ಕಟ್ಟನ್ನು ಎದುರಿಸುತ್ತಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತವು ದಶಕಗಳಿಂದ ಅಲ್ಪಾವಧಿಯ ಆರ್ಥಿಕ ಆಸಕ್ತಿಯ ಹಾದಿಯನ್ನು ಹಿಡಿದಿದೆ. ಇದು ಪರಿಸರ ವ್ಯವಸ್ಥೆಗಳ ಸಾಮರ್ಥ್ಯವನ್ನು ಕುಂಠಿತಗೊಳಿಸಲು ಕಾರಣವಾಗಿದೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಾಗತಿಕ ಪ್ರಯತ್ನದ ಭಾಗವಾಗಿ ಭಾರತವೂ ಈಗಾಗಲೇ ಪ್ರಯತ್ನ ಆರಂಭಿಸಿದೆ. 2050ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನೂ ಹೊಂದಿದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಭಾರತವು ಇನ್ನಷ್ಟು ಚುರುಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಶಾಸಕಾಂಗದ ಕ್ರಮಗಳನ್ನು ತ್ವರಿತಗೊಳಿಸಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ಹೆಚ್ಚಾಗಬೇಕು ಎಂದು ಅವರು ಹೇಳಿದ್ದಾರೆ.
ಉತ್ತಮ ಭವಿಷ್ಯಕ್ಕಾಗಿ, ಭಾರತವು ಪ್ರಕೃತಿಗೆ ಪೂರಕವಾಗಿ ಕೆಲಸಗಳನ್ನು ಮಾಡಬೇಕು. ಪ್ರಕೃತಿಗೆ ಹೊಂದಿಕೊಳ್ಳುವ ಆಹಾರ ವಿಧಾನ ಅಳವಡಿಸಿಕೊಳ್ಳಬೇಕು. ತ್ಯಾಜ್ಯವನ್ನು ಕಡಿಮೆಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.