ಮುಳ್ಳೇರಿಯ: ಅಸ್ತಿತ್ವಂ ಪ್ರತಿಷ್ಠಾನ ಕುಂಟಾರು ಇವರ ಸಹಯೋಗದೊಂದಿಗೆ ಸಂಸ್ಕøತ ಭಾರತಿ ಕಾಸರಗೋಡು ಇವರ ವತಿಯಿಂದ ಸಾಮಾಜಿಕ ಜಾಲತಾಣ ಮುಖಾಂತರ ದಶದಿನಗಳ ಸಂಸ್ಕೃತ ಸಂಭಾಷಣ ವರ್ಗವು ನಡೆಯಿತು.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಉದ್ಘಾಟಿಸಿದರು. ಕಹಳೆ ನ್ಯೂಸ್ ಸಂಸ್ಥಾಪಕ ಸಂಪಾದಕÀ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಅತಿಥಿಗಳಾಗಿದ್ದರು.
ದಶ ದಿನಗಳ ಸಂಸ್ಕೃತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸಂಸ್ಕೃತವು ದೇವ ಭಾಷೆ ಮಾತ್ರವಲ್ಲ ಭಾರತದ ಜೀವ ಭಾಷೆಯಾಗಿದೆ. ಒಂದಷ್ಟು ಪಾಶ್ಚಿಮಾತ್ಯ ಮಾನಸಿಕತೆಯ ಜನರು ಅದನ್ನು ಮೃತಭಾಷೆ ಎಂದು ಹೀಯಾಳಿಸಿದರೂ ಅದೇ ಪಾಶ್ಚಿಮಾತ್ಯರು ಕಂಪ್ಯೂಟರ್ ತಂತ್ರಜ್ಞಾನಕ್ಕೆ ಪೂರಕವಾದ ಪ್ರಪಂಚದ ಒಂದೇ ಒಂದು ಭಾಷೆ ಸಂಸ್ಕೃತ ಎಂಬುವುದನ್ನು ಪ್ರತಿಪಾದಿಸಿದ್ದಾರೆ. ಇಂದು ನಮ್ಮ ಜೀವ ಭಾಷೆಯಾದ ಸಂಸ್ಕೃತವನ್ನು ಕೇವಲ ಬ್ರಾಹ್ಮಣರ,ವಿದ್ವಾಂಸರ,ಪುರೋಹಿತರ ಭಾಷೆಯೆಂದು ಬಿಂಬಿಸುವ ವರ್ಗದ ಜನರಿದ್ದಾರೆ. ಆದರೆ ಅದು ಕೇವಲ ಆ ವರ್ಗದ ಭಾಷೆ ಮಾತ್ರವಲ್ಲ ಭಾರತದ ಎಲ್ಲ ವರ್ಗದ ಎಲ್ಲ ಜಾತಿಯ ಜನರಿಗೂ ಅಗತ್ಯವಾಗಿ ಸಂವಹನ ಮಾಧ್ಯಮಕ್ಕೆ ಅವಶ್ಯಕವಾದ ಭಾಷೆ. ಪ್ರತಿಯೊಬ್ಬರು ಈ ಭಾಷೆಯನ್ನು ಕಲಿಯಬೇಕು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಂಡು ಸಂಸ್ಕೃತಭಾಷೆ ಅಮೃತ ಭಾಷೆ ಎಂಬುದನ್ನು ಪುನಃ ಜಗತ್ತಿನ ಮುಂದೆ ಸಾರಬೇಕು ಎಂದು ಹೇಳಿದರು.
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಭಾರತಿಯ ಕಾಸರಗೋಡು ಜಿಲ್ಲಾ ಸಂಯೋಜಕ ಎಸ್,ಎಂ,ಉಡುಪ. ಕುಂಟಾರು, ಶಿಬಿರದ ಸಂಸ್ಕೃತ ಅಧ್ಯಾಪಿಕೆ ಸಂಧ್ಯಾ ವಿ ಕೆದಿಲಾಯ ಭಾಗವಹಿಸಿದ್ದರು. ಮಂಗಳೂರು ವಿಭಾಗ ಸಂಯೋಜಕ ಸತ್ಯನಾರಾಯಣ ಅವರು ಸಂಸ್ಕೃತ ಭಾರತಿಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು.