ನವದೆಹಲಿ: ಪರೀಕ್ಷೆ ಬರೆಯಬೇಕಾದ ವೈದ್ಯರು ಕೋವಿಡ್-19 ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂಬ ಕಾರಣಕ್ಕೆ ಅಂತಿಮ ವರ್ಷದ ಸ್ನಾತಕೋತ್ತರ ಪರೀಕ್ಷೆ ರದ್ದುಗೊಳಿಸಲು ಅಥವಾ ಮುಂದೂಡಲು ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಅಂತಿಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪರೀಕ್ಷೆ ರದ್ದುಗೊಳಿಸಲು ಅಥವಾ ಮುಂದೂಡಲು ಎಂದು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಯಾವುದೇ ಸಾಮಾನ್ಯ ಆದೇಶವನ್ನು ರವಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ ಆರ್ ಷಾ ಅವರ ರಜಾ ಪೀಠ ಹೇಳಿದೆ.
ಅಂತಿಮ ವರ್ಷದ ಪರೀಕ್ಷೆ ದಿನಾಂಕಗಳನ್ನು ಘೋಷಿಸುವಾಗ ಕೋವಿಡ್ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವಂತೆ ದೇಶದ ವಿಶ್ವವಿದ್ಯಾಲಯಗಳಿಗೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಏಪ್ರಿಲ್ ನಲ್ಲಿ ಈಗಾಗಲೇ ನೀಡಿರುವ ಸಲಹೆಯನ್ನು ಉನ್ನತ ನ್ಯಾಯಾಲಯ ಗಮನಿಸಿದೆ.
ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸಮಂಜಸವಾದ ಸಮಯವನ್ನು ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಎಲ್ಲಾ ವಿಶ್ವವಿದ್ಯಾಲಯಗಳಿಗೆ ನಿರ್ದೇಶನಗಳನ್ನು ನೀಡುವಂತೆ ರಿಟ್ ಅರ್ಜಿಯನ್ನು ಸಲ್ಲಿಸಿರುವ 29 ವೈದ್ಯರ ಪರ ಹಾಜರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ಸಲ್ಲಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು.
ಪರೀಕ್ಷೆ ತಯಾರಿಗೆ ಸೂಕ್ತವಾದ ಸಮಯ ಯಾವುದು ಎಂದು ನಮಗೆ ತಿಳಿದಿಲ್ಲ. ನ್ಯಾಯಾಲಯವು ಸಮಂಜಸವಾದ ಸಮಯವನ್ನು ಹೇಗೆ ನಿರ್ಧರಿಸುತ್ತದೆ? ಪ್ರತಿಯೊಬ್ಬರೂ ತಮ್ಮ ಸಮಂಜಸವಾದ ಸಮಯವನ್ನು ಹೊಂದಿರಬಹುದು. ಸಾಂಕ್ರಾಮಿಕ ಪರಿಸ್ಥಿತಿ ಪ್ರಕಾರ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಸಲಹೆ ಆಧಾರದ ಮೇಲೆ ವಿಶ್ವವಿದ್ಯಾನಿಲಯಗಳು ನಿರ್ಧಾರ ಕೈಗೊಳ್ಳಲಿವೆ ಎಂದು ನ್ಯಾಯಪೀಠ ಹೇಳಿತು.
ರಾಷ್ಟ್ರೀಯ ವೈದ್ಯಕೀಯ ಮಂಡಳಿ ಪರವಾಗಿ ಹಾಜರಾದ ವಕೀಲ ಗೌರವ್ ಶರ್ಮಾಸ ಕೋವಿಡ್-19 ಕರ್ತವ್ಯದಲ್ಲಿ ಎಲ್ಲಾ ವೈದ್ಯರು ಹಾಜರಾಗಿಲ್ಲ, ಕೋವಿಡ್ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡ ನಂತರ ಪರೀಕ್ಷೆ ನಡೆಸುವಂತೆ ಈಗಾಗಲೇ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಮಂಡಳಿ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.
ಕೋವಿಡ್ ಕರ್ತವ್ಯದಲ್ಲಿ ವೈದ್ಯರು ತೊಡಗಿಸಿಕೊಂಡಿರುವುದರಿಂದ ಪರೀಕ್ಷೆಗೆ ಸಿದ್ಧತೆ ನಡೆಸಿಲ್ಲವಾದ್ದರಿಂದ ಹಿರಿಯ ಸ್ಥಾನಿಕ ವೈದ್ಯರಾಗಲು ಸಾಧ್ಯವಿಲ್ಲ ಎಂದು ಹೆಗ್ಡೆ ಹೇಳಿದರು. ಪರೀಕ್ಷೆಗೆ ಹಾಜರಾಗದ ವೈದ್ಯರಿಗೆ ಬಡ್ತಿ ನೀಡಲು ಅವಕಾಶ ನೀಡುತ್ತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.