ನವದೆಹಲಿ: ಆಸ್ಟ್ರಾಜೆನೆಕಾದ ಕೋವಿಡ್ ಲಸಿಕೆಯ (ಕೋವಿಶೀಲ್ಡ್) ಡೋಸ್‌ಗಳ ನಡುವಣ ಅಂತರವನ್ನು ದ್ವಿಗುಣಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿರಲಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿಯ ಮೂವರು ವಿಜ್ಞಾನಿಗಳು ಹೇಳಿದ್ದಾರೆ.
ಡೋಸ್‌ಗಳ ನಡುವಣ ಅಂತರವನ್ನು 6-8 ವಾರಗಳಿಗೆ ಬದಲಾಗಿ 12-16 ವಾರಗಳಿಗೆ ವಿಸ್ತರಿಸಲಾಗಿದೆ ಎಂದು ಮೇ 13ರಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿತ್ತು. ದೇಶದಾದ್ಯಂತ ಲಸಿಕೆಗೆ ಬೇಡಿಕೆ ಹೆಚ್ಚಿ, ಪೂರೈಕೆ ಕಡಿಮೆಯಾದ ಸಂದರ್ಭದಲ್ಲೇ ಈ ನಿರ್ಧಾರ ಪ್ರಕಟಿಸಲಾಗಿತ್ತು.
ಲಸಿಕಾಕರಣದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು (ಎನ್‌ಟಿಎಜಿಐ) ಬ್ರಿಟನ್‌ನಿಂದ ಪಡೆದ ಸಾಕ್ಷ್ಯಗಳ ಆಧಾರದಲ್ಲಿ ಮಾಡಿದ್ದ ಶಿಫಾರಸಿನ ಮೇರೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿತ್ತು. ಆದರೆ, ಡೋಸ್ ನಡುವಣ ಅಂತರ ಹೆಚ್ಚಿಸುವ ಶಿಫಾರಸು ಮಾಡಲು ಸಾಕಷ್ಟು ದತ್ತಾಂಶಗಳು ಸಲಹಾ ಸಮಿತಿಯ ಬಳಿ ಇರಲಿಲ್ಲ ಎಂದು ಸಮಿತಿಯ 14 ಸದಸ್ಯರ ಪೈಕಿ ಮೂವರು ವಿಜ್ಞಾನಿಗಳು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಸಲಹೆ ನೀಡಿರುವ 8-12 ವಾರಗಳ ಅವಧಿಯನ್ನು ಸಲಹಾ ಸಮಿತಿ ಪರಿಗಣಿಸಬಹುದು. ಆದರೆ, 12 ವಾರಗಳಿಗೂ ಹೆಚ್ಚಿನ ಅಂತರ ನಿಗದಿಪಡಿಸುವುದರಿಂದ ಆಗಬಹುದಾದ ಪರಿಣಾಮಗಳಿಗೆ ಸಂಬಂಧಿಸಿ ಸಮಿತಿಯ ಬಳಿ ದತ್ತಾಂಶಗಳಿಲ್ಲ ಎಂದು ಸಾಂಕ್ರಾಮಿಕ ಸೋಂಕುಶಾಸ್ತ್ರದ ರಾಷ್ಟ್ರೀಯ ಸಂಸ್ಥೆಯ ಮಾಜಿ ನಿರ್ದೇಶಕ ಎಂ.ಡಿ.ಗುಪ್ಟೆ ಹೇಳಿದ್ದಾರೆ.
'8-12 ವಾರಗಳ ಅಂತರ ಒಪ್ಪಬಹುದು. ಆದರೆ ಸರ್ಕಾರವು 12-16 ವಾರಗಳ ಅವಧಿ ನಿಗದಿಪಡಿಸಿದೆ. ಇದರಿಂದ ಒಳಿತಾಗಲೂಬಹುದು ಆಗದೆಯೂ ಇರಬಹುದು. ನಮ್ಮಲ್ಲಿ ಆ ಬಗ್ಗೆ ಮಾಹಿತಿ ಇಲ್ಲ' ಎಂದೂ ಅವರು ಹೇಳಿದ್ದಾರೆ.
ಇದಕ್ಕೆ ಸಮಿತಿಯ ಮತ್ತೊಬ್ಬ ಸದಸ್ಯ ಮ್ಯಾಥ್ಯೂ ವರ್ಗೀಸ್ ಸಹಮತ ವ್ಯಕ್ತಪಡಿಸಿದ್ದಾರೆ. ನಾವು ಲಸಿಕೆಯ ಡೋಸ್ ನಡುವಣ ಅಂತರವನ್ನು 8-12 ವಾರಗಳ ವರೆಗೆ ವಿಸ್ತರಿಸಬಹುದು ಎಂದಷ್ಟೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು ಎಂದು ವರ್ಗೀಸ್ ಹೇಳಿದ್ದಾರೆ.
ಡೋಸ್ ನಡುವಣ ಅಂತರವನ್ನು ವೈಜ್ಞಾನಿಕ ತಳಹದಿಯ ಮೇಲೆಯೇ ಹೆಚ್ಚಿಸಲಾಗಿದೆ. ಈ ವಿಚಾರದಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಇರಲಿಲ್ಲ ಎಂದೂ ಆರೋಗ್ಯ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿತ್ತು.
ಲಸಿಕೆ ಕೊರತೆಯ ಕಾರಣಕ್ಕೆ ಅಂತರ ಹೆಚ್ಚಿಸಲಾಗಿಲ್ಲ ಎಂದು ಆರೋಗ್ಯಾಧಿಕಾರಿಗಳು ಮೇ 15ರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.