ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗದಿದ್ದಾಗ ಸ್ನೇಹಿತರು, ಸಮಾನ ಮನಸ್ಕರೊಡನೆ ಮುಕ್ತವಾಗಿ ರ್ಚಚಿಸುವ ವೇದಿಕೆಯಾಗಿ ರೂಪುಗೊಂಡಿರುವ ಕ್ಲಬ್ಹೌಸ್ ಆಪ್ನಲ್ಲಿ ಅಪಾಯದ ಸೈರನ್ ಕೂಡ ಪ್ರತಿಧ್ವನಿಸಲಾರಂಭಿಸಿದೆ. ಆರೋಗ್ಯಕರ ಮಾತುಕತೆ ಜತೆಗೆ ದೇಶ, ಧರ್ಮದ ವಿಚಾರವಾಗಿ ಕೋಮುದ್ವೇಷ, ರಾಜಕೀಯ ವೈಷಮ್ಯ, ಡೇಟಿಂಗ್, ಲೈಂಗಿಕತೆ ವಿಚಾರಗಳು ಅಂಕೆಯಿಲ್ಲದ ಈ ವೇದಿಕೆಯಲ್ಲಿ ಮುಕ್ತವಾಗಿ ಹೊರಹೊಮ್ಮುತ್ತಿರುವುದು ಸಂಭಾವ್ಯ ಅಪಾಯದ ಮುನ್ಸೂಚನೆ ಹೊರಹಾಕಿದೆ. ದಿನಕಳೆದಂತೆ ಈ ಆಪ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗತೊಡಗಿದೆ. ಪ್ರತಿನಿತ್ಯ ಹತ್ತಾರು ಭಾಷೆಗಳಲ್ಲಿ ಸಾವಿರಾರು ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣ ಗಳಾದ ಫೇಸ್ಬುಕ್, ಟ್ವಿಟರ್ನಲ್ಲಿ ಅಕ್ಷರ, ವಿಡಿಯೋಗಳ ಮೂಲಕ ಸಂವಹನ ನಡೆದರೆ ಸಹಜ ರೀತಿಯ ಆಡಿಯೋ ಸಂವಹನಕ್ಕೆ ಕ್ಲಬ್ಹೌಸ್ ಜನಪ್ರಿಯವಾಗುತ್ತಿದೆ. ಯಾರು, ಏನು ಬೇಕಾದರೂ ಮಾತನಾಡಲು ಇರುವ ಈ ವೇದಿಕೆ ಮೇಲೆ ಕಾನೂನು ಕ್ರಮ ಕೈಗೊಳ್ಳಲೂ ಕಷ್ಟಕರವಾಗುವ ಅಪಾಯವಿದೆ.
ಎಲ್ಲೆಲ್ಲಿ ನಿಷೇಧ?: ಕಾರ್ಯನಿರ್ವಹಣೆಗೆ ಸೂಕ್ತ ಪರವಾನಗಿ ಇಲ್ಲ. ಮುಕ್ತ ಮಾತಿಗೆ ನಿಯಂತ್ರಣವಿಲ್ಲ ಎಂಬ ಕಾರಣಕ್ಕೆ ಈಗಾಗಲೇ ಒಮನ್ನಲ್ಲಿ ಕ್ಲಬ್ಹೌಸ್ ನಿಷೇಧಗೊಂಡಿದೆ. ಜೋರ್ಡಾನ್, ಚೀನಾದಲ್ಲೂ ನಿಷೇಧಿಸಲಾಗಿದೆ. ಚೀನಾದಲ್ಲಿ ಕಳೆದ ವರ್ಷ ಕ್ಲಬ್ಹೌಸ್ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲದ ಆ ದೇಶದಲ್ಲಿ ಹಾಂಗ್ಕಾಂಗ್ನಲ್ಲಿನ ಪ್ರತಿಭಟನೆಗಳು, ತೈವಾನ್ನ ರಾಜಕೀಯ ಸ್ಥಿತಿ ಸೇರಿ ಚೀನಾ ಸರ್ಕಾರದ ನಿಲುವಿಗೆ ವಿರುದ್ಧವಾದ ಅನೇಕ ವಿಚಾರಗಳನ್ನು ಜನರು ರ್ಚಚಿಸುತ್ತಿದ್ದರು. ಇರಾನ್, ಈಜಿಪ್ಟ್ನಲ್ಲೂ ಕ್ಲಬ್ಹೌಸ್ ಬಳಕೆಗೆ ನಿರ್ಬಂಧವಿದೆ.
ಕೇರಳದಲ್ಲಿ ಸಂಘರ್ಷ:
ಕ್ಲಬ್ಹೌಸ್ ಕೇರಳದಲ್ಲೂ ವಿವಾದಕ್ಕೆ ಕಾರಣವಾಗಿದೆ. 2 ವಾರದ ಹಿಂದೆ ಕ್ರೖೆಸ್ತ ಸಮೂಹದ ಚರ್ಚೆಯೊಂದು ನಡೆದಿತ್ತು. ಅದರಲ್ಲಿ ತಮ್ಮ ಸಮುದಾಯದ ವಿರುದ್ಧ ಲವ್ ಜಿಹಾದ್ ನಡೆಯುತ್ತಿದೆ ಎಂದು ಅನೇಕರು ಮಾತನಾಡಿದ್ದರು. ಆ ವೇಳೆ ಮುಸ್ಲಿಂ ಸಮುದಾಯದ ಕುರಿತು ಆಕ್ಷೇಪಾರ್ಹ, ಅವಮಾನಕರ ಮಾತುಗಳಾಡಿದ್ದನ್ನು ಕೆಲವರು ರೆಕಾರ್ಡ್ ಮಾಡಿ ಹರಿಬಿಟ್ಟಿದ್ದರು. ಈ ವಿಚಾರ ಎರಡೂ ಸಮುದಾಯಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ, ಕೊನೆಗೆ ಧಾರ್ವಿುಕ ಮುಖಂಡರ ಮಧ್ಯಪ್ರವೇಶದಿಂದ ಶಮನವಾಯಿತು.
ಕ್ಲಬ್ಹೌಸ್ನಲ್ಲಿ ಪೊಲೀಸ್: ಕೇರಳದಲ್ಲಿ ಕ್ಲಬ್ಹೌಸ್ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಅಲ್ಲಿನ ಪೊಲೀಸ್ ಇಲಾಖೆಯೂ ಕ್ಲಬ್ಹೌಸ್ ಖಾತೆ ತೆರೆದಿದೆ. ಅಲ್ಲಿ ನಡೆಯುವ ಚರ್ಚೆಗಳ ಮೇಲೆ ನಿಗಾವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರವಾಗಲಿ ಎಂಬ ಕಾರಣಕ್ಕೆ ಈ ಹೆಜ್ಜೆ ಇಟ್ಟಿದೆ. ಕ್ಲಬ್ಹೌಸ್ನಲ್ಲಿ ಫೇಸ್ಬುಕ್, ಟ್ವಿಟರ್ ರೀತಿ ನಕಲಿ ಖಾತೆ ತೆರೆಯಲು ಸಾಧ್ಯವಿಲ್ಲ ಎಂದು ಭಾವಿಸಲಾಗಿದೆ. ಆದರೆ, ಈಗಾಗಲೇ ಕೇರಳದ ಅನೇಕ ನಟರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅವರ ರೀತಿಯಲ್ಲಿ ಮಾತನಾಡುವ ಪ್ರಯತ್ನ ನಡೆದಿವೆ. ಸ್ವತಃ ಕೇರಳ ಪೊಲೀಸ್ ಹೆಸರಿನಲ್ಲೇ ಹತ್ತಾರು ನಕಲಿ ಖಾತೆಗಳನ್ನು ತೆರೆಯಲಾಗಿದೆ.
ಏನಿದು ಕ್ಲಬ್ಹೌಸ್?:
ವಾಯ್ಸ್ ಆಧಾರಿತ ಸೋಷಿಯಲ್ ಮೀಡಿಯಾ ಆಪ್
2020ರಲ್ಲಿ ಪರಿಚಯ: ಅಮೆರಿಕದ ತಂತ್ರಜ್ಞ ಪಾಲ್ ಡೇವಿಸನ್ ಹಾಗೂ ಭಾರತೀಯ ಮೂಲದ ರೋಹನ್ ಸೇಠ್ ಅಮೆರಿಕದ ಆಲ್ಪಾ ಎಕ್ಸ್ಪ್ಲೊರೇಷನ್ ಕಂಪನಿ ಹೆಸರಿನಲ್ಲಿ ಕಳೆದ ವರ್ಷ ಕ್ಲಬ್ಹೌಸ್ ಪರಿಚಯಿಸಿದರು. 2020ರ ಮಾರ್ಚ್ನಲ್ಲಿ ಐಒಎಸ್ನಲ್ಲಿ ಬಿಡುಗಡೆಯಾದ ಈ ಆಪ್ ಅನ್ನು 2021ರ ಮೇನಲ್ಲಿ ಆಂಡ್ರಾಯ್್ಡಲ್ಲೂ ಪರಿಚಯಿಸಲಾಯಿತು.
ಆತಂಕವೇನು?: ಲೈಂಗಿಕತೆ, ಡೇಟಿಂಗ್ ಕುರಿತ ಅನೇಕ ಚರ್ಚೆಗಳಿಗೆ ಕ್ಲಬ್ಹೌಸ್ ವೇದಿಕೆಯಾಗಿದೆ, ಇದಲ್ಲದೆ ದೇಶದ್ರೋಹ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುವ ತಂತ್ರಗಳಿಗೂ ಅವಕಾಶ ನೀಡಬಹುದೆಂಬ ಆತಂಕದ ಜತೆಗೆ ಸಾಕಷ್ಟು ಆಕ್ಷೇಪಗಳೂ ಕೇಳಿಬರುತ್ತಿವೆ.
ಐಟಿ ಕಾಯ್ದೆ ಅಡಿ ಬರಲಿ: ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ವಿಚಾರ ಪ್ರಾಬಲ್ಯ ಪಡೆಯದಂತೆ ತಡೆಯಲು ಕೇಂದ್ರ ಸರ್ಕಾರ ರೂಪಿಸಿರುವ ಐಟಿ ಕಾಯ್ದೆಯೊಳಕ್ಕೆ ಕ್ಲಬ್ಹೌಸ್ನಂತಹ ವೇದಿಕೆಗಳನ್ನು ಸೇರ್ಪಡೆ ಮಾಡ ಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದೆ.
ನಿಯಮಾವಳಿಗಳೇನು?
- ಕ್ಲಬ್ಹೌಸ್ ವೇದಿಕೆಯಲ್ಲಿ ನಡೆಯುವ ಚರ್ಚೆಗಳನ್ನು ಯಾರೂ ರೆಕಾರ್ಡ್ ಮಾಡುವಂತಿಲ್ಲ
- ಕಂಪನಿ ಮಾತ್ರ ತಾತ್ಕಾಲಿಕವಾಗಿ ರೆಕಾರ್ಡ್ ಮಾಡುತ್ತದೆ. ಚರ್ಚೆ ವೇಳೆ ಯಾರಾದರೂ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದರೆ ತನಿಖೆ ನಡೆಸುವ ಸಲುವಾಗಿ ಧ್ವನಿಮುದ್ರಿಕೆ ಬಳಸಲಾಗುತ್ತದೆ
- ತನಿಖೆ ಅಂತ್ಯದ ಬಳಿಕ ಧ್ವನಿಮುದ್ರಿಕೆಯನ್ನು ಡಿಲೀಟ್ ಮಾಡಲಾಗುತ್ತದೆ
- ಯಾವುದೇ ದೂರು ದಾಖಲಾಗದಿದ್ದರೆ, ಚರ್ಚೆ ಮುಗಿದ ಕೂಡಲೇ ಧ್ವನಿಮುದ್ರಿಕೆ ತಾನೇತಾನಾಗಿ ಡಿಲೀಟ್ ಆಗುತ್ತದೆ.
- ಒಮ್ಮೆ ಚರ್ಚೆ ಮುಕ್ತಾಯವಾದ ನಂತರ ಪೊಲೀಸ್ ಸೇರಿ ಯಾವುದೇ ಏಜೆನ್ಸಿಗಳು ಅಲ್ಲಿ ನಡೆದಿದ್ದ ಆಕ್ಷೇಪಾರ್ಹ ಮಾತಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ.