HEALTH TIPS

ಬನ್ನಿ...ಚಹಾ ಸೇವಿಸುತ್ತಾ ಮಾತಾಡೋಣ...ಚಹಾದ ಬಗ್ಗೆ! -SUNDAY TALIK

   ಹಾಯ್....ಸ್ನೇಹಿತರೆ....ಚಾಯ್ ತಂದಿದ್ದೀನಿ .......ನೋಡ್ತೀರಾ....ಇಲ್ಲೊಮ್ಮೆ........................................

         ಪ್ಲೀಸ್ ಎಲ್ಲಿದೆ ಎಂದು  ಕೇಳ್ಬೇಡಿ. ನೋಡುತ್ತೀರಾ ಎಂದಷ್ಟೇ ಕೇಳಿದೆ. ಕೋಪ ಮಾಡ್ಕೋಬೇಡಿ ಮಾರಾಯರೆ!. ಈ ಟೀ ಯ ವಿಷಯವೇ ಹಾಗೆ. ಅದು ತಲೆಗೆ ಹೊಕ್ಕಿತೋ....ಮುಗೀತು. ಮತ್ತೆ ಒಂದು ಡೋಸ್ ಚಾ ಆದ್ರೂ ಸೇವಿಸದಿದ್ದರೆ ಹುಚ್ಚೆÀದ್ದು ಬಿಡ್ತದೆ ಮನಸ್ಸು. 

             ನಿಮಗೊತ್ತಾ.....ಜಗತ್ತಿನ ಎಲ್ಲಾ ಒಳಿತು-ಕೆಡುಕು, ಸುಖ-ದುಃಖ, ಯುದ್ದ-ಶಾಂತಿಗಳ ಆರಂಭ ಮತ್ತು ಅಂತ್ಯಗಳೆರಡೂ ಚಹಾದಿಂದಲೇ ಅಂತೆ ಎಂದು ನನ್ನ ಟೀ ಸ್ನೇಹಿತರೂ, ಹಿರಿಯರೂ ಆದ ಖಂಡಿಗೆ ರಾಮಣ್ಣ ಹೇಳಿದ್ದರು. ಬಹುಷಃ ಅದು ಸತ್ಯವೇ ಇರಬೇಕು. ಖುಷಿಯಾದಾಗಲೂ, ನೋವಾದಗಲೂ ಚಹಾ ಸೇವಿಸುತ್ತೇವೆ. ನನಗೊಂದು ಚಹಾ ಬೇಕೆಂದು ಮನೆಯವಳಲ್ಲಿ ಹೇಳಿದಾಗ ಆರಂಭದಲ್ಲಿ ಯುದ್ದದ ಕಾರ್ಮೋಡ ಡಟ್ಟವಿಸುತ್ತದೆ. ನಿಮಗೆ ಹೊತ್ತು-ಗೊತ್ತೆಂಬುದಿಲ್ಲ. ಈಗಷ್ಟೇ ಒಂದು ಚಹಾ ಸೇವಿಸಿದ್ದಲ್ವಾ. ಇನ್ನು ಈಗ ಮತ್ತೆ ಮಾಡಿ ಕೊಡಬೇಕಾ. ಬೇರೆ ಜನ ನೋಡಿ....ಹೀಗೆ ಯುದ್ದ ಶುರುವಾಗುತ್ತದೆ. ಕೊನೆಗೆ ಒಂದು ಕಪ್ ಚಹಾ ನಮ್ಮಿದಿರು ಬಂದಿರುತ್ತದೆ. ಅಲ್ಲಿಗೆ ಶಾಂತಿ ಎಂದರ್ಥ. ಆದರೆ ಕೆಲವೊಮ್ಮೆ ಅದು ಹೊಸತೊಂದಕ್ಕೆ ಆರಂಭವೂ ಆಗುತ್ತದೆ. ಹೇಗೆಂದರೆ ಅಲ್ಲರೀ....ಈ ಚೂರೀದಾರ ಖರೀದಿಸಿ ಆಯ್ತು ಎರಡು ವಾರ ಎಂಬಲ್ಲಿಂದ.ನಿಮಗೀಗ ಗೊತ್ತಾಗಿರಬೇಕಲ್ಲ.!

                ಹೋಗ್ಲಿ ಬಿಡಿ ನಮಗ್ಯಾಕೆ ಊಸಾಬರಿ. ತಂದರಾಯಿತು. ಈಗ................

    ನಿನ್ನೆ ನನ್ನಲ್ಲೊಬ್ಬರು ಕೇಳಿದ್ದರು..........ಕೋವಿಡ್ ಲಸಿಕೆ ಹಾಕಿದಂದು ಚಹಾ ಸೇವನೆ ಒಳಿತಲ್ಲವಂತೆ ಹೌದೇ ಎಂದು. ಎಂತ ನೀಚ ಜನರಪ್ಪಾ ಹೇಳಿದವರು!. ಚಹಾಕ್ಕೂ, ಕೊರೊನಾಕ್ಕೂ, ಲಸಿಕೆಗೂ ಎಂತಣಿಂದೆತ್ತ ಸಂಬಂಧವೋ? ಬಹುಷಃ ಕೊರೊನಾ ಚೀನಾದಿಂದ ಉತ್ಪತ್ತಿಯಾಯಿತೆಂದು ತಿಳಿಯಲಾಗಿದ್ದು, ಚಹಾದ  ಮೂಲವೂ ಚೀನಾ ತಾನೆ. ಹಾಗಿರಬಹುದೇನೊ. ಗೊತ್ತಿಲ್ಲ. 

               ನೀವು ಗಮನಿಸಿರಬಹುದು; ಹೆಣ್ಣುಮಕ್ಕಳು ಸಾಮಾನ್ಯವಾಗಿ ಚಹಾ ಕುಡಿಯುವುದಿಲ್ಲ. ಅವರದೇನಿದ್ದರೂ ಕಾಫಿ ರಾಗ, ಚಹಾ ಕುಡಿಯುವ ಮಹಿಳೆಯರೂ ಸಾಮಾನ್ಯ ವಾಗಿ ಶ್ರಮಜೀವಿಗಳೇ. ಹೀಗಿರುವಾಗ ಶ್ರಮಕ್ಕೂ ಚಹಾಕ್ಕೂ ಏನಾದರೂ ಸಂಬಂಧ ಇರಬಹುದೇ? ಅದೂ ಸಂಶೋಧನೆಗೆ ಅರ್ಹ ವಸ್ತು.

         ಕುಡಿಯುವುದಕ್ಕೊಂದು ಧಾರ್ಮಿಕವಾದ ಆಧ್ಯಾತ್ಮಿಕವಾದ ಕಾರಣವೂ ಇರಬಹುದು ಅನ್ನಿಸಿದ್ದಕ್ಕೆ ಕಾರಣ ಚೀನಾ ಮತ್ತು ಜಪಾನಿನ ಕತೆಗಳಲ್ಲಿ ಬರುವ ಚಹಾದ ಪ್ರಸ್ತಾಪವೂ ಇರಬಹುದು. ಶ್ರೀಲಂಕಾದಲ್ಲೂ ಚಹಾಕ್ಕೆ ಪ್ರಾಧಾನ್ಯ. ಅಚಾನಕ್ಕಾಗಿಯೋ ಏನೋ ಬುದ್ಧನಲ್ಲಿ ನಂಬಿಕೆ ಇಟ್ಟ ದೇಶಗಳೆಲ್ಲ ಚಹಾದ ಬಗ್ಗೆಯೂ ಪ್ರೀತಿ ಇಟ್ಟುಕೊಂಡಿವೆ.

             ಸಾಹಿತ್ಯದಲ್ಲೂ ಚಹಾದ ಪ್ರಸ್ತಾಪ ಮತ್ತೆ ಮತ್ತೆ ಬರುತ್ತ ಥಟ್ಟನೆ ನೆನಪಾಗುವ ಎರಡು ಪ್ರಸಂಗಗಳು ಹೀಗಿವೆ;

      ಒಬ್ಬ ಗುರು. ಅವನ ಹತ್ತಿರ ಶಿಷ್ಯತ್ವ ಸ್ವೀಕರಿಸುವುದಕ್ಕೆ ಒಬ್ಬ ಬರುತ್ತಾನೆ. ಗುರು ಏನನ್ನೂ ಹೇಳಿಕೊಡಬಾರದು. ಶಿಷ್ಯ ಸ್ವಯಂಸ್ಫೂರ್ತಿಯಿಂದ ಕಲಿಯಬೇಕು ಅನ್ನುವುದು ನಿಯಮ. ಹೀಗಾಗಿ ಶಿಷ್ಯ ಗುರುವಿನ ಪ್ರತಿಯೊಂದು ನಡವಳಿಕೆಯನ್ನೂ ಗಮನಿಸುತ್ತಾ ಇರುತ್ತಾನೆ.

          ಹೀಗಿರುವಾಗ ಒಮ್ಮೆ ಗುರುವನ್ನು ನೋಡುವುದಕ್ಕೆ ಒಬ್ಬ ಶ್ರೀಮಂತ ಬರುತ್ತಾನೆ. ಗುರುವಿಗೆ ತನ್ನೆಲ್ಲ ಸಂಪತ್ತನ್ನೂ ಸಮರ್ಪಿಸುವುದಾಗಿ ಹೇಳುತ್ತಾನೆ. ಮಾತು ಶುರುಮಾಡುತ್ತಿದ್ದಂತೆ ಗುರು, "ಇವನಿಗೊಂದು ಕಪ್ ಟೀ ಕೊಟ್ಟು ಕಳುಹಿಸಿ ' ಅನ್ನುತ್ತಾನೆ, ಮೇಲೆ ಮತ್ತೊಬ್ಬ ನಾಸ್ತಿಕ ಬರುತ್ತಾನೆ. ಗುರುವನ್ನು ಬೈಯಲು ಶುರುವಿಡುತ್ತಾನೆ. ಆತ ಮಾತು ಶುರು ಮಾಡುತ್ತಿದ್ದಂತೆ ಗುರು, "ಇವನಿಗೊಂದು ಕಪ್ ಟೀ ಕೊಟ್ಟು ಕಳುಹಿಸಿ ' ಅನ್ನುತ್ತಾನೆ.

        ಆಮೇಲೊಬ್ಬಳು ವಿಧವೆ ಬರುತ್ತಾಳೆ. ಗಂಡ ತೀರಿಕೊಂಡ ದುಃಖದಲ್ಲಿದ್ದಾಳೆ. ಅವಳು ಗೋಳು ಹೇಳಿಕೊಳ್ಳುತ್ತಿದ್ದಂತೆ ಗುರು ಮತ್ತೆ ಅದೇ ಮಾತು ಹೇಳುತ್ತಾನೆ; 'ಈಕೆಗೊಂದು ಕಪ್ ಟೀ….'

ನೋಡುತ್ತಿದ್ದ ಶಿಷ್ಯನಿಗೆ ಚೋದ್ಯವೆನಿಸುತ್ತದೆ. ಗುರುವನ್ನು ಕೇಳುತ್ತಾನೆ. ನೀವು ನಿಮ್ಮನ್ನು ನೋಡಲು ಬಂದವರಿಗೆಲ್ಲ ಒಂದು ಕಪ್ ಟೀ ಕೊಟ್ಟು ಕಳುಹಿಸುತ್ತೀರಲ್ಲ. ಅವರಿಗೆ ಅದರಲ್ಲೇ ಸಮಾಧಾನ ಸಿಕ್ಕವರಂತೆ ಹೋಗುತ್ತಾರಲ್ಲ. ಇದರ ರಹಸ್ಯ ಏನು? ಗುರು ಹೇಳುತ್ತಾನೆ: 'ಯಾರಲ್ಲಿ… ಈತನಿಗೊಂದು ಟೀ ಕೊಟ್ಟು ಕಳುಹಿಸು. '

            ಇದನ್ನು ವಿವರಿಸಿದರೆ ಕೆಡುತ್ತದೆ. ಇಂಥದ್ದೇ ಇನ್ನೊಂದು ಕತೆ ಕೇಳಿ: ಗುರುವಿನ ಬಳಿಗೆ ಒಬ್ಬ ಶಿಷ್ಯತ್ವ ಸ್ವೀಕರಿಸಲು ಬರುತ್ತಾನೆ. ಬಂದು ತನ್ನ ಬಗ್ಗೆ ಹೇಳಿಕೊಳ್ಳಲು ಆರಂಭಿಸುತ್ತಾನೆ. 'ಗುರುಗಳೇ.. ನಾನು ಅನೇಕ ಧರ್ಮಗ್ರಂಥಗಳನ್ನು ಓದಿದ್ದೇನೆ. ಶಾಸ್ತ್ರ ಪುರಾಣಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ತರ್ಕಶಾಸ್ತ್ರದಲ್ಲಿ ಪರಿಣತಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ವೇದಾಂತದ ವಿವಿಧ ಶಾಖೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದೇನೆ…. ತಾವು ನನಗೆ ಮಹತ್ತರವಾದ ವಿದ್ಯೆ ಕಲಿಸಬೇಕು. ನನ್ನನ್ನು ಜ್ಞಾನಿಯಾಗಿ ಮಾಡಬೇಕು'.

        ಗುರು ಮಾತಾಡುವುದಿಲ್ಲ. ಒಂದು ಜಾಡಿ ಚಹಾ ತರಿಸುತ್ತಾನೆ. ಶಿಷ್ಯತ್ವ ಸ್ವೀಕರಿಸಲು ಬಂದವನ ಮುಂದೆ ಒಂದು ಕಪ್ ಇಟ್ಟು, 'ಮೊದಲು ಚಹಾ ಕುಡಿ. ನಂತರ ಮಾತಾಡೋಣ ' ಅನ್ನುತ್ತಾನೆ, ಶಿಷ್ಯ ನೋಡುತ್ತಿರುವಂತೆಯೇ ಜಾಡಿಯಿಂದ ಕಪ್‍ಗೆ ಚಹಾ ಸುರಿಯುತ್ತಾನೆ. ಕಪ್ ತುಂಬಿ ಚಹಾ ಹರಿದು ಹೋಗುತ್ತಿದ್ದರೂ ಸುರಿಯುತ್ತಲೇ ಇರುತ್ತಾನೆ.

ಶಿಷ್ಯ ಎಚ್ಚರಿಸುತ್ತಾನೆ; ಗುರುಗಳೇ ಕಪ್ ತುಂಬಿಹೋಗಿ ಚಹಾ ಚೆಲ್ಲುತ್ತಿದೆ. ಇನ್ನೂ ಸುರೀತಾ ಇದ್ದೀರಲ್ಲ.

ನೀನೂ ಅಷ್ಟೇ. ಈಗಾಗಲೇ ತುಂಬಿಕೊಂಡಿದ್ದೀಯ. ನನಗೆ ಗೊತ್ತಿರುವುದನ್ನು ನಾನೆಲ್ಲಿ ತುಂಬಲಿ. ಮೊದಲು ಖಾಲಿಯಾಗಿ ಬಾ. ಆಮೇಲೆ ನೋಡೋಣಂತೆ.

          ಜಾರ್ಜ್ ಆರ್ವೆಲ್ ಹೆಸರಿನಲ್ಲಿ ಬರೆಯುತ್ತಿದ್ದ ಎರಿಕ್ ಬ್ಲೇರ್ ಚಹಾದ ಬಗ್ಗೆ ಒಂದು ಕುತೂಹಲಕರ ಪ್ರಬಂಧ ಬರೆದಿದ್ದಾನೆ. ಒಬ್ಬ ಲೇಖಕ ಇಂಥ ಸಂಗತಿಗಳ ಬರೆಯುತ್ತಾನೆ ಅನ್ನುವುದನ್ನು ಇವತ್ತು ನಮ್ಮಲ್ಲಿ ಊಹಿಸಿಕೊಳ್ಳುವುದಕ್ಕೂ ಕಷ್ಟ. ಬಿಜಿಎಲ್ ಸ್ವಾಮಿ, ಡಿವಿಜಿ, ಗೊರೂರು ಮುಂತಾದವರು ಇಂಥ ತರಹೇವಾರಿ ಸಂಗತಿಗಳ ಕುರಿತು ಬರೆಯುತ್ತಿದ್ದರು.

            ನಮ್ಮ ಯಕ್ಷಗಾನ ಕಲಾವಿದರಂತೂ ಚಹಾ ದಲ್ಲಿ ಮಾಸ್ಟರ್ ಡಿಗ್ರಿ, ಪಿ.ಎಚ್.ಡಿ ವರೆಗೂ ಜ್ಞಾನವುಳ್ಳವರು. ಆದರೆ ಅವರು ಚಹಾ ಇಲ್ಲದೆ ವೇಷ ಮಾಡಲಾರರು. ಅಥವಾ ಪಾತ್ರಾವಹಾನೆಗೆ ಟೀ ಕಪ್ ಒಂದು ಬೇಕೇ ಬೇಕೆಂದು ಚೌಕಿಯೊಳಗಿನ ಸಾಮಾನ್ಯ ಮಾತು. 

     ನಾನು ಮೈಸೂರಲ್ಲಿ ಓದುತ್ತಿದ್ದ ಆರಂಭದ ಸಂದರ್ಭ, ಮಾನಸ ಗಂಗೋತ್ರಿಯ ಹೊರಾವರಣದ ಟೀ ಗೂಡಲ್ಲಿ ಚಾ ಸವಿಯುತ್ತಿದ್ದೆ. ಯಾರೋ ಒಬ್ಬರು ಹಿರಿಯರು ಬಂದು ನನ್ನಲ್ಲಿ ಟೀಕಾರಾಂ ಕಿದರ್ ಹೆ? ಎಂದು ಕೇಳಿದ್ದರು. ನಾನು ಆಗೆಂದಲ್ಲ...ಈಗಲೂ ಹಿಂದಿಯಲ್ಲಿ ಭಾರೀ ಹಿಂದಿರುವವ. ಅವರ ಪ್ರಶ್ನೆ ನನಗೆ ಸರಿಯಾಗಿ ಅರ್ಥವೇ ಆಗಿರಲಿಲ್ಲ ಆದರೂ ಬಿಟ್ಟುಕೊಡಬಾರದೆಂದು.......ಮೊದಲಿನ ಎರಡಕ್ಷರ ಬಿಟ್ಟು ರಾಂ ಎಂಬವರು ನನಗೆ ಗೊತ್ತಿಲ್ಲ ಎಂದು ಆಂಗಿಕಾಭಿನಯದಲ್ಲಿ ತಿಳಿಸಿದೆ. ಟೀ ಕುಡಿಯಲು ರಾಂ ಎಂಬವರು ಬಂದಿದ್ದನಿರಬೇಕು. ಅವರನ್ನು ಇವರು ಹುಡುಕುತ್ತಿರಬೇಕು ಎಂದೇ ಭಾವಿಸಿದ್ದೆ. ನಿಜವಾಗ್ಲೂ ಹೇಳ್ತೇನೆ. ಆವರೆಗೂ ನನಗೆ ಈ ಟೀಕಾರಾಂ ಎಂಬ ಒಂದು ಹೆಸರಿದೆ, ಅದೊಂದು ನಾಮಪದ ಎಂಬುದು ಗೊತ್ತೇ ಇರಲಿಲ್ಲ.   ಮತ್ತೆ ಗೊತ್ತಾಯ್ತು ಬಿಡಿ. 


        


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries