ತೆಲಂಗಾಣ: ಇತ್ತೀಚೆಗೆ ನಾಲ್ಕು ವಸಂತಗಳನ್ನ ಪೂರೈಸಿದ ಗ್ರೀನ್ ಇಂಡಿಯನ್ ಚಾಲೆಂಜ್ನ ಭಾಗವಾಗಿ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಕೇವಲ 1 ಗಂಟೆಯಲ್ಲಿ 1 ಮಿಲಿಯನ್ ಸಸಿಗಳನ್ನ ನೆಡುವ ಮೂಲಕ ವಿಶ್ವ ದಾಖಲೆಯನ್ನ ನಿರ್ಮಿಸಿದೆ.
ಕೆಲಸಗಾರರ ಈ ಕಾರ್ಯವನ್ನ ಮೆಚ್ಚಿದ ವಂಡರ್ ಬುಕ್ ಆಫ್ ರೆಕಾರ್ಡ್ ಕೆಲಸಗಾರರಿಗೆ ಹಾಗೂ ಕಾರ್ಯಕ್ರಮ ಸಂಘಟಕರಿಗೆ ಮೆಚ್ಚುಗೆ ಪತ್ರವನ್ನ ರವಾನಿಸಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ಜೋಗು ರಾಮಣ್ಣ ತಮ್ಮ 58ನೇ ಹುಟ್ಟು ಹಬ್ಬದ ಅಂಗವಾಗಿ ರಿಮ್ಸ್ ಆಸ್ಪತ್ರೆಗೆ 2 ಆಂಬುಲೆನ್ಸ್ಗಳನ್ನ ಕೊಡುಗೆಯಾಗಿ ನೀಡಿದ್ರು.
200 ಎಕರೆ ಜಾಗದಲ್ಲಿ ಮಿಯಾವಕಿ ಮಾದರಿಯಲ್ಲಿ ಸುಮಾರು 5 ಲಕ್ಷ ಸಸಿಗಳನ್ನ ನೆಡಲಾಗಿದೆ. ಕಾರ್ಯಕ್ರಮದ ವೇಳೆ ಈ ಭೂಮಿಯನ್ನ 10 ವಿಭಾಗವಾಗಿ ವಿಂಗಡಿಸಲಾಯ್ತು. ಈ ಕಾರ್ಯಕ್ರಮದಲ್ಲಿ ಸ್ಥಳೀಯರು, 30 ಸಾವಿರಕ್ಕೂ ಅಧಿಕ ಟಿಆರ್ಎಸ್ ಸದಸ್ಯರು, ಅರಣ್ಯ ಹಾಗೂ ಪರಿಸರ ಇಲಾಖೆ ಸಚಿವ ಎ. ಇಂದ್ರಾ ಕಿರಣ್ ರೆಡ್ಡಿ ಭಾಗಿಯಾಗಿದ್ದರು.
2019ರಲ್ಲಿ ಟರ್ಕಿ 1 ಗಂಟೆ ಅವಧಿಯಲ್ಲಿ 3.03 ಲಕ್ಷ ಗಿಡಗಳನ್ನ ನೆಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿತ್ತು.