ನವದೆಹಲಿ: ಸಿಬಿಎಸ್‌ಇ ಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಅಂಕಗಳ ನಿಗದಿಗೆ ಅನುಸರಿಸುವ ಮಾನದಂಡ ಸಂಬಂಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜುಲೈ 9ರಂದು ನಡೆಸಲು ದೆಹಲಿ ಹೈಕೋರ್ಟ್ ಒಪ್ಪಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಆಗಸ್ಟ್ 28ಕ್ಕೆ ಈ ಅರ್ಜಿ ವಿಚಾರಣೆ ಮುಂದೂಡಿತ್ತು. ಆದರೆ, ಜಸ್ಟೀಸ್ ಫಾರ್ ಆಲ್ ಸ್ವಯಂ ಸೇವಾ ಸಂಸ್ಥೆ, 'ಈ ಅರ್ಜಿಯನ್ನು ಬೇಗ ವಿಚಾರಣೆ' ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಸ್ವಯಂ ಸೇವಾ ಸಂಸ್ಥೆಯ ಪರವಾಗಿ ಹಾಜರಾದ ವಕೀಲ ಖಾಗೇಶ್ ಝಾ, 'ಈ ಅರ್ಜಿ ಯಾವುದೇ ವ್ಯತಿರಿಕ್ತವಾದ ವಿಚಾರಗಳನ್ನು ಗುರಿಯಾಗಿಸಿಲ್ಲ. ಆದರೆ 'ಅಂಕಗಳ ಲೆಕ್ಕಾಚಾರಕ್ಕೆ ವಿದ್ಯಾರ್ಥಿಗಳು ಈ ಹಿಂದೆ ಪಡೆದಿರುವ ಅಂಕಗಳನ್ನೇ ಪ್ರಮುಖ ಅಂಶವಾಗಿ ಬಳಸುವುದರಿಂದ ಆಗುವ ಗಂಭೀರವ ಪರಿಣಾಮಗಳನ್ನು ಎತ್ತಿ ತೋರಿಸುತ್ತಿದೆ' ಎಂದು ಹೇಳಿದರು.
'ಒಮ್ಮೆ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಮುಗಿದು, ಫಲಿತಾಂಶ ಪ್ರಕಟವಾದರೆ, ನಾವು ಸಲ್ಲಿಸಿರುವ ಅರ್ಜಿಯು ಪರಿಣಾಮಕಾರಿಯಾಗುವುದಿಲ್ಲ' ಎಂದು ಸ್ವಯಂ ಸೇವಾಸಂಸ್ಥೆ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಿದೆ.
ಎನ್‌ಜಿಒ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ, ಅರ್ಜಿಯ ವಿಚಾರಣೆಯನ್ನು ಜುಲೈ 9ರಂದು ನಡೆಸಲು ಒಪ್ಪಿಗೆ ನೀಡಿತು.