ನವದೆಹಲಿ: ದೇಶದಲ್ಲಿ ಮಹಮಾರಿ ಕೊರೋನಾ ವೈರಸ್ ಮತ್ತೆ ಹೆಚ್ಚುತ್ತಿದ್ದು, ಕಳೆದ ಕೆಲವು ವಾರಗಳಿಂದ ಕೋವಿಡ್ ಪಾಸಿಟಿವ್ ಪ್ರಮಾಣ ಶೇಕಡಾ 10ಕ್ಕಿಂತ ಹೆಚ್ಚು ವರದಿಯಾಗುತ್ತಿರುವ ಜಿಲ್ಲೆಗಳಲ್ಲಿ ಜನರ ಚಲನವಲನ ಮತ್ತು ಜನಸಂದಣಿಯನ್ನು ತಡೆಯಲು ಅಥವಾ ಕಡಿಮೆ ಮಾಡಲು ಕಠಿಣ ನಿರ್ಬಂಧಗಳನ್ನು ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರ ಪ್ರಕರಣಗಳು ಹೆಚ್ಚುತ್ತಿರುವ 10 ರಾಜ್ಯಗಳಿಗೆ ಸೂಚಿಸಿದೆ.
ದೇಶದ 46 ಜಿಲ್ಲೆಗಳಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು, ಇನ್ನೂ 53 ಜಿಲ್ಲೆಗಳಲ್ಲಿ ಶೇ. ಐದರಿಂದ 10ರಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ರಾಜ್ಯ ಸರ್ಕಾರಗಳು ಕೋವಿಡ್ -19 ಪತ್ತೆಗಾಗಿ ಪರೀಕ್ಷೆಯನ್ನು ಹೆಚ್ಚಿಸಬೇಕು. ಈ ಹಂತದಲ್ಲಿ ಯಾವುದೇ ನಿರ್ಬಂಧಗಳನ್ನು ಸಡಿಲಸಬಾರದು. ಇಲ್ಲದಿದ್ದರೆ ಈ ಜಿಲ್ಲೆಗಳಲ್ಲಿ ಪರಿಸ್ಥಿತಿ ಹದಗೆಡುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಒಡಿಶಾ, ಅಸ್ಸಾಂ, ಮಿಜೋರಾಂ, ಮೇಘಾಲಯ, ಆಂಧ್ರಪ್ರದೇಶ ಮತ್ತು ಮಣಿಪುರದ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದರು.
ಈ ರಾಜ್ಯಗಳಲ್ಲಿ ಆರೋಗ್ಯ ಅಧಿಕಾರಿಗಳು ಕೋವಿಡ್ ಕಣ್ಗಾವಲು, ನಿಯಂತ್ರಣ ಮತ್ತು ನಿರ್ವಹಣೆಗೆ ತೆಗೆದುಕೊಂಡ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸಹ ಪರಿಶೀಲಿಸಲಾಯಿತು. ಈ ರಾಜ್ಯಗಳು ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಅಥವಾ ಪಾಸಿಟಿವ್ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರಾಜ್ಯಗಳಲ್ಲಿ ಶೇಕಡಾ 80 ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ಮನೆಯಲ್ಲೇ ಇರುವುದಾಗಿ ವರದಿಯಾಗಿರುವುದನ್ನು ಗಮನಿಸಿದರೆ, ಈ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಮತ್ತು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದ್ದು ಅದು ಇತರ ಜನರನ್ನು ಭೇಟಿಯಾಗದಂತೆ ಮತ್ತು ಸೋಂಕು ಹರಡದಂತೆ ಹೇಳಿದೆ.