ನವದೆಹಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆಗೂ ಮುನ್ನ 12 ಸಚಿವರು ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವ್ಡೇಕರ್, ಹರ್ಷವರ್ಧನ್, ಡಿ.ವಿ ಸದಾನಂದ ಗೌಡ ಸೇರಿದಂತೆ ಒಟ್ಟು 12 ಸಚಿವರು ಸಂಪುಟ ವಿಸ್ತರಣೆ ಹಿನ್ನೆಲೆ ಹೊಸ ಸಚಿವರಿಗೆ ಅವಕಾಶ ಮಾಡಿಕೊಡಲು ರಾಜೀನಾಮೆ ನೀಡಿದ್ದರು. 6 ಕ್ಯಾಬಿನೆಟ್ ಸಚಿವರು, ಓರ್ವ ರಾಜ್ಯ ಖಾತೆ ಸಚಿವ (ಸ್ವತಂತ್ರ ನಿರ್ವಹಣೆ) ಹಾಗೂ 5 ರಾಜ್ಯ ಖಾತೆ ಸಚಿವರು ರಾಜೀನಾಮೆ ನೀಡಿದ್ದಾರೆ.
ರವಿಶಂಕರ್ ಪ್ರಸಾದ್ (ಕಾನೂನು, ನ್ಯಾಯ, ಸಂವಹನ, ಐಟಿ ಹಾಗೂ ಎಲೆಕ್ಟ್ರಾನಿಕ್ಸ್) ಪ್ರಕಾಶ್ ಜಾವ್ಡೇಕರ್ (ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ), ಹರ್ಷವರ್ಧನ್ (ಆರೋಗ್ಯ ಹಾಗೂ ಕುಟುಂಬ ಕಲ್ಯಾಣ) ಡಿ.ವಿ ಸದಾನಂದ ಗೌಡ (ರಸಗೊಬ್ಬರ, ರಾಸಯನಿಕ) ಅವರೊಂದಿಗೆ ಥಾವರ್ ಚಂದ್ ಗೆಹ್ಲೋಟ್ (ಸಾಮಾಜಿಕ ನ್ಯಾಯ, ಸಬಲೀಕರಣ) ರಮೇಶ್ ಪೋಖ್ರಿಯಾಲ್ ನಿಶಾಂಕ್ (ಶಿಕ್ಷಣ) ರಾಜೀನಾಮೆ ನೀಡಿದ ಇತರ ಸಚಿವರಾಗಿದ್ದಾರೆ. ಸಂತೋಷ್ ಕುಮಾರ್ ಗಂಗ್ವಾರ್ ( ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವ, ಸ್ವತಂತ್ರ ನಿರ್ವಹಣೆ) ರಾಜೀನಾಮೆಯನ್ನೂ ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.
ರಾಜೀನಾಮೆ ನೀಡಿದ ರಾಜ್ಯಖಾತೆ ಸಚಿವರು: ಬಾಬುಲ್ ಸುಪ್ರಿಯೋ (ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ), ಧೋತ್ರೆ ಸಂಜಯ್ ಶಮರಾವ್ (ಶಿಕ್ಷಣ), ರಿಟಾನ್ ಲಾಲ್ ಕಟಾರಿಯಾ (ಜಲ ಶಕ್ತಿ), ಪ್ರತಾಪ್ ಚಂದ್ರ ಸಾರಂಗಿ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಮತ್ತು ದೇಬಶ್ರೀ ಚೌಧುರಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)