ಕಾಸರಗೋಡು: ಸಾಮಾನ್ಯರಿಗೆ ಉದ್ದಿಮೆ ಬಗ್ಗೆ ಪರಿಣತಿ ಒದಗಿಸಿ, ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಆರಂಭಿಸಲಾದ ಸ್ಟಾರ್ಟ್ ಅಪ್ ವಿಲ್ಲೇಜ್ ಎಂಟರ್ ಪ್ರನರ್ಸ್ ಪ್ರೋಗ್ರಾಂ(ಎಸ್.ವಿ.ಇ,ಪಿ.) ನೀಲೇಶ್ವರ ಬ್ಲಾಕ್ ನಲ್ಲಿ ಪ್ರಗತಿಯಲ್ಲಿದೆ.
ಕಳೆದ 3 ವರ್ಷಗಳ ಅವಧಿಯಲ್ಲಿ 1223 ಕಿರು ಉದ್ದಿಮೆಗಳನ್ನು ಈ ನಿಟ್ಟಿನಲ್ಲಿ ಆರಂಭಿಸಲಾಗಿದೆ. 1,628 ಮಂದಿ ಉದ್ದಿಮೆದಾರರು ಈ ಸಾಲಿನಲ್ಲಿದ್ದು, ಇವರಲ್ಲಿ 1488 ಮಹಿಳೆಯರು, 140 ಪುರುಷರೂ ಇದ್ದಾರೆ. ನೀಲೇಶ್ವರ ಬ್ಲಾಕ್ ವ್ಯಾಪ್ತಿಯ ಚೆರ್ವತ್ತೂರು, ಪಡನ್ನ, ವಲಿಯಪರಂಬ, ಪಿಲಿಕೋಡ್, ತ್ರಿಕರಿಪುರ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತಿಗಳಲ್ಲಿ ಎಸ್.ವಿ.ಇ.ಪಿ ಯೋಜನೆ ಜಾರಿಗೊಳಿಸಲಾಗಿದೆ. 2018 ರಲ್ಲಿ ಆರಂಭಿಸಲಾದ ಯೋಜನೆ ವಿಶೇಷವಾಗಿ ಗ್ರಾಮೀಣ ಜನತೆಗೆ ತುಂಬ ಉಪಕಾರಿಯಾಗಿದೆ. ಮಹಿಳೆಯರಿಗೆ, ಪರಿಶಿಷ್ಟ ಜಾತಿ-ಪಂಗಡದವರಿಗೆ ಸ್ವಾವಲಂಬಿತನ ತಂದುಕೊಟ್ಟಿದೆ. ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮಬಾರಿಗೆ ಕುಟುಂಬಶ್ರೀ ಮೈಕ್ರೋ ಉದ್ದಿಮೆ ವ್ಯವಸ್ಥೆಯ ಮೂಲಕ ಉದ್ದಿಮೆ ಹಬ್ ನೀಲೇಶ್ವರ ಬ್ಲಾಕ್ ಎಸ್.ವಿ.ಇ,ಪಿ. ಮೂಲಕ ಸಾಧ್ಯವಾಗಿದೆ. ಉದ್ದಿಮೆ ಬಗ್ಗೆ ಅಭಿರುಚಿಹೊಂದಿರುವ ಜನತೆಗೆ ಉದ್ದಿಮೆ ಆರಮಭಿಸಲು ಪ್ರೋತ್ಸಾಹ ನೀಡುವ ಮೂಲಕ ಅವರ ಬದುಕನ್ನು ಸುಧಾರಿಸುವ ಯತ್ನ ಈ ಮೂಲಕ ನಡೆಸಲಾಗುತ್ತಿದೆ ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿರುವರು.
ಪರಿಣತಿ ತರಬೇತಿ, ಮಾರಾಟ ಮೇಳ, ಕೆ.ಶ್ರೀ ಮಾಸ್ಕ್, ಜನಪರ ಭೋಜನಶಾಲೆ, ಕೆ.ಶ್ರೀ. ಹಪ್ಪಳ, ಜಾಗೃತಿ ಶಿಬಿರ ಇತ್ಯಾದಿಗಳು ಈ ನಿಟ್ಟಿನಲ್ಲಿ ಗಮನಾರ್ಹವಾಗಿವೆ. 4 ವರ್ಷ ವಿ.ಎಸ್.ಇ.ಪಿ. ಯೋಜನೆಯ ಕಾಲಾವಧಿಯಾಗಿದೆ. ಒಟ್ಟು 5.30 ಕೋಟಿ ರೂ. ಯೋಜನೆಯ ಮೊಬಲಗು ಆಗಿದೆ. ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚೆರ್ವತ್ತೂರು ಸಿ.ಡಿ.ಎಸ್. ನೊಂದಿಗೆ ಕೈಜೊಡಿಸಿ ಬಿ.ಆರ್.ಸಿ.( ಬ್ಲಾಕ್ ರಿಸೋರ್ಸ್ ಸೆಂಟರ್) ಕಚೇರಿ 2018 ರಿಂದ ಚಟುವಟಿಕೆ ನಡೆಸುತ್ತಿದೆ. 6 ಗ್ರಾಮ ಪಂಚಾಯತಿಗಳ ಉದ್ದಿಮೆದರರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ 12 ಮೈಕ್ರೋ ಎಂಟರ್ ಪ್ರೈಸಸ್ ಕನ್ಸಲ್ಟೆಂಟ್ ಗಳು ಇಲ್ಲಿ ಕ್ರಿಯಾಶೀಲರಾಗಿದ್ದಾರೆ. ನೆರೆಕೂಟಗಳು, ಎ.ಡಿ.ಎಸ್., ಸಿ.ಡಿ.ಎಸ್. ಮೂಲಕ ಉದ್ದಿಮೆ ಬಗ್ಗೆ ಮಾಹಿತಿ ಹಂಚುವ ಸ್ಥಳೀಯ ಮಟ್ಟದ 15 ಮಂದಿ ಯುವತಿಯರು ಪರಿಣತಿಹೊಂದಿದ್ದಾರೆ.