ನವದೆಹಲಿ: ಕರ್ನಾಟಕದ ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ದೇಶದ 12 ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅನುಮೋದಿಸಿದ್ದಾರೆ.
ಹರಿಯಾಣ ಕೇಂದ್ರೀಯ ವಿ.ವಿ, ಹಿಮಾಚಲ ಪ್ರದೇಶ, ಜಮ್ಮು, ಜಾರ್ಖಂಡ್, ತಮಿಳುನಾಡು ಹಾಗೂ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ದಕ್ಷಿಣ ಬಿಹಾರ್ ಕೇಂದ್ರೀಯ ವಿಶ್ವವಿದ್ಯಾಲಯ, ಮಣಿಪುರ ವಿಶ್ವವಿದ್ಯಾಲಯ, ಮೌಲಾನಾ ಆಜಾದ್ ನ್ಯಾಷನಲ್ ಉರ್ದು ಯುನಿವರ್ಸಿಟಿ, ನಾರ್ತ್ ಈಸ್ಟರ್ನ್ ಹಿಲ್ ಯುನಿವರ್ಸಿಟಿ, ಗುರು ಘಾಸಿದಾಸ್ ಯುನಿವರ್ಸಿಟಿಗಳಿಗೂ ಕುಲಪತಿಗಳನ್ನು ನೇಮಕ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
'ದೇಶದ 22 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಹುದ್ದೆಗಳು ಖಾಲಿ ಇದ್ದು, ಈ ಪೈಕಿ 12 ವಿ.ವಿ.ಗಳಿಗೆ ನೇಮಕಾತಿ ಪೂರ್ಣಗೊಂಡಿದೆ' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜ್ಯಸಭೆಯಲ್ಲಿ ಗುರುವಾರ ಹೇಳಿಕೆ ನೀಡಿದ್ದರು.