ತಿರುವನಂತಪುರ: ಕೊರೋನಾ ಸಾಂಕ್ರಾಮಿಕ ರೋಗದಿಂದ ಸುಮಾರು 15 ಲಕ್ಷ ವಲಸಿಗರು ಉದ್ಯೋಗ ಕಳೆದುಕೊಂಡು ಕೇರಳಕ್ಕೆ ಮರಳಿರುವರೆಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು 10 ಲಕ್ಷ ಜನರು ಉದ್ಯೋಗ ಕಳೆದುಕೊಂಡವರ ಪಟ್ಟಿಯಲ್ಲಿದ್ದಾರೆ. ಜೂನ್ 18 ರಂದು ಸರ್ಕಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿತು. ಕೇರಳದ ಬೆನ್ನೆಲುಬು ಎಂದು ಬಣ್ಣಿಸಲ್ಪಟ್ಟಿರುವ ವಲಸಿಗ ಸಮುದಾಯದ ಹೆಚ್ಚಿನ ಭಾಗವು ಉದ್ಯೋಗ ಕಳೆದುಕೊಂಡು ಮರಳಿದೆ ಎಂದು ಇದು ತೋರಿಸುತ್ತದೆ.
ಊರಿಗೆ ಬಂದವರಲ್ಲಿ ಹೆಚ್ಚಿನವರು ಮರಳಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಪ್ರಕಾರ, ಕೇರಳದ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು 2.7 ಮಿಲಿಯನ್ ಪ್ರಯಾಣಿಕರನ್ನು ಕರೆತಂದಿದೆ. ಮೇ 2020 ರಿಂದ 12 ತಿಂಗಳ ಅಂಕಿಅಂಶಗಳು ಇವು.
ನೋರ್ಕಾ ವರದಿಯ ಪ್ರಕಾರ, ಈ ಅವಧಿಯಲ್ಲಿ 14,63,176 ಜನರು ಊರಿಗೆ ಮರಳಿದ್ದಾರೆ. ಈ ಪೈಕಿ 10,45,288 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಇಲ್ಲಿಯವರೆಗೆ ಹಿಂದಿರುಗಿದವರ ಒಟ್ಟು ಶೇಕಡಾ 70 ರಷ್ಟಿದೆ. ವೀಸಾ ಅವಧಿ ಮುಗಿದ ಕಾರಣ 2.90 ಲಕ್ಷ ಜನರಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಇವರಲ್ಲಿ ಮಕ್ಕಳು, ವಯಸ್ಕರು ಮತ್ತು ಗರ್ಭಿಣಿ ಮಹಿಳೆಯರು ಒಳಗೊಂಡಿದ್ದಾರೆ
ಹಿಂದಿರುಗಿದವರಲ್ಲಿ ಶೇಕಡಾ 96 ರಷ್ಟು ಯುಎಇ, ಕತಾರ್, ಸೌದಿ ಅರೇಬಿಯಾ ಮತ್ತು ಒಮಾನ್ ದೇಶದಲ್ಲಿ ಉದ್ಯೋಗದಲ್ಲಿರುವವರು. ಈ ಪೈಕಿ 8.67 ಲಕ್ಷ ಯುಎಇಯಿಂದ ಬಂದವರಾಗಿದ್ದಾರೆ. 55,960 ಮಾತ್ರ ಇತರ ದೇಶಗಳಿಂದ ಬಂದವರು. ಆದರೆ, ಹಿಂದಿರುಗಿದವರ ಸಂಖ್ಯೆಯನ್ನು ಸರ್ಕಾರ ಖಚಿತಪಡಿಸಿಲ್ಲ ಎಂದು ನೋರ್ಕಾ ನೇಮಕಾತಿ ವ್ಯವಸ್ಥಾಪಕ ಅಜಿತ್ ಕೋಲಸೇರಿ ತಿಳಿಸಿದ್ದಾರೆ.