ನವದೆಹಲಿ: ಆಗಸ್ಟ್ ತಿಂಗಳಲ್ಲಿ 15 ಕೋಟಿ ಡೋಸ್ ಕೋವಿಡ್ ಲಸಿಕೆ ಜನರಿಗೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆಯು ಕೋವಿಡ್‌ನಿಂದ ಸಂಭವಿಸುವ ಸಾವಿನ ಪ್ರಮಾಣವನ್ನು ಶೇ 98ರಷ್ಟು ಕಡಿಮೆ ಮಾಡುತ್ತದೆ ಎಂಬ ಸಮೀಕ್ಷಾ ವರದಿಯ ಬೆನ್ನಲ್ಲೇ ಅಧಿಕಾರಿಗಳು ಲಸಿಕೆ ಲಭ್ಯತೆ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ.
'ಲಸಿಕೆಯ ಒಂದು ಭಾಗವನ್ನು ಕೇಂದ್ರ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಪ್ರಕ್ರಿಯೆಗಳಿಗಾಗಿ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆಯ ಬಳಿಕ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ನಾವು ಅಂದಾಜಿಸಿದ ಪ್ರಕಾರ ಆಗಸ್ಟ್‌ನಲ್ಲಿ 15 ಕೋಟಿ ಡೋಸ್ ಲಸಿಕೆ ಲಭ್ಯವಿರಲಿದೆ' ಎಂದು ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಸರ್ಕಾರದ ಪ್ರಧಾನ ಸಲಹೆಗಾರರಾಗಿರುವ ವಿ.ಕೆ.ಪಾಲ್ ತಿಳಿಸಿದ್ದಾರೆ.
ಇದು ಜುಲೈನಲ್ಲಿ ಲಭ್ಯವಿದ್ದ ಲಸಿಕೆಗಳಿಗಿಂತ ಹೆಚ್ಚಾಗಿದೆ. ಜುಲೈನಲ್ಲಿ ಈವರೆಗೆ 12 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.