ನವದೆಹಲಿ: ಪಿಎನ್ಬಿ ಸಾಲ ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಸಹೋದರಿ ಪೂರ್ವಿ ಮೋದಿಗೆ ಸೇರಿದ ಬ್ರಿಟನ್ ಬ್ಯಾಂಕ್ ಖಾತೆಯಿಂದ 17.25 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ.
ಪ್ರಕರಣದಲ್ಲಿ ಸಹಾಯ ನೀಡಿದರೆ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿಂದ ಕ್ಷಮಿಸಲು ಅನುಮತಿ ನೀಡುವುದಾಗಿ ಹೇಳಿದ ಬೆನ್ನಲ್ಲೇ ಬ್ಯಾಂಕ್ ಖಾತೆಯಿಂದ 17 ಕೋಟಿ ರೂ.ಗಳನ್ನು ಭಾರತೀಯ ಸರ್ಕಾರಕ್ಕೆ ರವಾನಿಸಿದ್ದಾರೆ ಎಂದು ಇಡಿ ತಿಳಿಸಿದೆ
ಜೂನ್ 24ರಂದು ಪೂರ್ವಿ ಮೋದಿ ಅವರಿಗೆ ಲಂಡನ್‌ನಲ್ಲಿರುವ ಬ್ಯಾಂಕ್ ವೊಂದರಲ್ಲಿ ಖಾತೆ ತೆರೆದಿರುವುದಾಗಿ ಸಂದೇಶ ಬಂದಿತ್ತು. ಅಲ್ಲದೆ ಅದರಲ್ಲಿ ಭಾರೀ ಮೊತ್ತದ ಹಣವನ್ನು ಜಮೆ ಮಾಡಲಾಗಿತ್ತು. ಈ ಬಗ್ಗೆ ಪೂರ್ವಿ ಮೋದಿ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದರು.
ಪೂರ್ವಿ ಮೋದಿಯವರ ಸಹಕಾರದಿಂದ ಇಡಿ ಅಪರಾಧಿಯ ಆದಾಯದಿಂದ ಸುಮಾರು 17.25 ಕೋಟಿ ರೂ. ವಸೂಲಿ ಮಾಡಲು ಸಾಧ್ಯವಾಗಿದೆ ಎಂದು ಅದು ಹೇಳಿದೆ.
ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ಪ್ರಸ್ತುತ ಬ್ರಿಟನ್ ಜೈಲಿನಲ್ಲಿದ್ದಾರೆ. ಮುಂಬೈನ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ನ ಬ್ರಾಡಿ ಹೌಸ್ ಶಾಖೆಯಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ವಂಚನೆ ಆರೋಪವಿದೆ.