ತಿರುವನಂತಪುರ: ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 18 ತಿಂಗಳ ಮಗುವಿನ ಚಿಕಿತ್ಸೆಗೆ ಬೇಕಾಗಿರುವ ಔಷಧಿಯ ಮೇಲಿನ ಆಮದು ಸುಂಕ ಮತ್ತು ಜಿಎಸ್‌ಟಿಯನ್ನು ಮನ್ನಾಗೊಳಿಸುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
'ಕಣ್ಣೂರು ಜಿಲ್ಲೆಯ ಪಿ.ಕೆ ರಫೀಕ್ ಮತ್ತು ಮರಿಯಮ್ಮ ದಂಪತಿಯ 18 ತಿಂಗಳ ಮಗು ಮೊಹಮ್ಮದ್, ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ (ಎಸ್‌ಎಂಎ) ಬಳಲುತ್ತಿದೆ. ಚಿಕಿತ್ಸೆಗೆ ಬೇಕಾಗಿರುವ ಔಷಧಿಯ ಬೆಲೆ ದುಬಾರಿಯಾಗಿದೆ. ಈ ವೆಚ್ಚವನ್ನು ಭರಿಸಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಬೇಕಾಗಿರುವ ಔಷಧಿಯ ಬೆಲೆ 18 ಕೋಟಿಯಾಗಿದ್ದು, ಅದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ' ಎಂದು ಪಿಣರಾಯಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
'ಈ ಹಿಂದೆಯೂ ಕೇಂದ್ರ ಸರ್ಕಾರ ಇಂತಹದ್ದೇ ಕಾಯಿಲೆಯಿಂದ ಬಳಲುತ್ತಿದ್ದ ಐದು ತಿಂಗಳ ಮಗುವಿನ ಚಿಕಿತ್ಸೆಗೆ ಬೇಕಾದ ಔಷಧಿ ಮೇಲಿನ ಆಮದು ಸುಂಕ ಮತ್ತು ಜಿಎಸ್‌ಟಿಯನ್ನು ಮನ್ನಾ ಮಾಡಿತ್ತು. ಹಾಗಾಗಿ 18 ತಿಂಗಳ ಮಗುವಿನ ಚಿಕಿತ್ಸೆಗೆ ಬೇಕಾಗಿರುವ ಜೊಲ್ಗೆನ್ಸ್ಮಾ ಔಷಧಿ ಮೇಲೆ ಜಿಎಸ್‌ಟಿ ಮತ್ತು ಆಮದು ಸುಂಕ ವಿಧಿಸದಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ನಿರ್ದೇಶನ ನೀಡಿ' ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೇರಳದಲ್ಲಿ ಮೊಹಮ್ಮದ್ ಚಿಕಿತ್ಸೆಗೆ ಔಷಧಿಯನ್ನು ಖರೀದಿಸಲು ಆನ್‌ಲೈನ್ ಕ್ರೌಡ್‌ಫಂಡಿಂಗ್ ಮೂಲಕ 18 ಕೋಟಿ ಸಂಗ್ರಹಿಸಲಾಗಿದೆ.