ಕೋವಿಡ್ 19 ರೋಗ ಬಂದ ವರ್ಷದೊಳಗಾಗಿ ಲಸಿಕೆ ಕಂಡು ಹಿಡಿದು ಅದನ್ನು ಜನರಿಗೆ ನೀಡಲಾಗಿದೆ. ಕೋವಿಡ್ 19 ವಿರುದ್ಧ ಸಮರ್ಥವಾಗಿ ಹೋರಾಡಬಲ್ಲ ಪ್ರತಿಕಾಯಗಳ ಬಗ್ಗೆ ನಿರಂತರವಾಗಿ ಅಧ್ಯಯನಗಳು ನಡೆಯುತ್ತಲೇ ಇವೆ.
ಲಸಿಕೆ ನೀಡಿದಾಗ ಕೋವಿಡ್ 19 ವಿರುದ್ಧ ಹೋರಾಡುವ ಪ್ರತಿಕಾಯಗಳು ಉತ್ಪತ್ತಿಯಾಗುವುದಾದರೂ ಇವುಗಳು ನಮ್ಮ ದೇಹದಲ್ಲಿ ಎಷ್ಟು ಸಮಯ ಇರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಈ ಕುರಿತು ಅಧ್ಯಯನಗಳು ನಡೆಯುತ್ತಲೇ ಇವೆ.
ಇದೀಗ ಜರ್ಮಿನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸಿಟ್ಯೂಟ್ (MPI) ಒಂದು ಬಗೆಯ ಪ್ರತಿಕಾಯಗಳನ್ನು ಉತ್ಪಾದಿಸಿದ್ದು ಇದು ಕೊರೊನಾ ವಿರುದ್ಧ ಹೋರಾಡಲು ಹೆಚ್ಚು ಸಮರ್ಥವಾಗಿದೆ ಎಂದು ಹೇಳಲಾಗುತ್ತಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:
ಅಲ್ಪಕಾಸ್ ಎಂಬ ಸಸ್ತನಿಯ ರಕ್ತದಿಂದ ತಯಾರಿಸಿದ ಪ್ರತಿಕಾಯಗಳು
ಜರ್ಮನಿಯ ಸಂಶೋಧಕರು ಕೋವಿಡ್ 19 ವಿರುದ್ಧ ಅತಿ ಸಮರ್ಥವಾಗಿ ಹೋರಾಡಬಲ್ಲ ಪ್ರತಿಕಾಯಗಳನ್ನು (antibodies) ಉತ್ಪಾದಿಸಿದ್ದು ಅದನ್ನು ಅಲ್ಪಕಾಸ್ ಎಂಬ ಸಸ್ತನಿಯ ರಕ್ತದಿಂದ ತಯಾರಿಸಲಾಗಿದೆ. ಈ ಸಸ್ತನಿಗಳು ದಕ್ಷಿಣ ಅಮೆರಿಕದಲ್ಲಿ ಕಾಣ ಸಿಗುತ್ತವೆ.
ಅಧ್ಯಯನ
ಈ ಅಧ್ಯಯನದಲ್ಲಿ ಸಂಶೋಧಕರು ಮೊದಲಿಗೆ 3 ಆಲ್ಪಕಾಸ್ ಸಸ್ತನಿಗಳಿಗೆ ಕೊರೊನಾವೈರಸ್ ಸ್ಪೈಕ್ ಪ್ರೊಟೀನ್ ಅನ್ನು ಇಮ್ಯೂನೈಸ್ಡ್ (ಅವುಗಳು ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ವೃದ್ಧಿಸುವುದು) ಮಾಡಲಾಯಿತು. ಸ್ವಲ್ಪ ದಿನಗಳ ಬಳಿಕ ಅವುಗಳ ರಕ್ತದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಲಾಯಿತು, ಆ ಸಸ್ತನಿಗಳ ರಕ್ತವು ಕೋವಿಡ್ 19 ವೈರಸ್ ಅನ್ನು ಸಂಪೂರ್ಣವಾಗಿ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ ಎಂಬುವುದು ತಿಳಿದು ಬಂತು.
ಈ ಪ್ರತಿಕಾಯಗಳು ಕೋವಿಡ್ 19ನ ಎಲ್ಲಾ ತಳಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ
ಸಂಶೋಧಕ ಪ್ರಕಾರ ಅಭಿವೃದ್ಧಿ ಪಡಿಸಿರುವ ಈ ಪ್ರತಿಕಾಯಗಳು SARS-CoV-2ನ ರೂಪಾಂತರಗಳಾದ Alpha, Beta, Delta ಮತ್ತು Gamma ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು MPI ನಿರ್ದೇಶಕರಾದ ದಿರಿಕ್ ಗೋರ್ಲಿಚ್ ಹೇಳಿದ್ದಾರೆ. ಇವುಗಳನ್ನು ನ್ಯಾನೋಬಾಡೀಸ್ ಎಂದು ಕರೆಯಲಾಗಿದ್ದು ಸದ್ಯಕ್ಕೆ ಕ್ಲಿನಿಕಲ್ ಟ್ರಯಲ್‌ನಲ್ಲಿದೆ.
ಈ ನ್ಯಾನೋಬಾಡೀಸ್ ಅನ್ನು ಕಡಿಮೆ ಖರ್ಚಿನಲ್ಲಿ ಅಧಿಕ ಜನರಿಗೆ ನೀಡಬಹುದು
EMBO ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ ಈ ನ್ಯಾನೋಬಾಡೀಸ್ ಕೋವಿಡ್ 19 ವಿರುದ್ಧ ಈಗ ಇರುವ ಪ್ರತಿಕಾಯಗಳಿಗಿಂತ 1000 ಪಟ್ಟು ಉತ್ತಮವಾಗಿದ್ದು ಇದನ್ನು ಕಡಿಮೆ ಖರ್ಚಿನಲ್ಲಿ ಉತ್ಪಾದಿಸಬಹುದು ಹಾಗೂ ಅತೀ ಹೆಚ್ಚಿನ ಜನರಿಗೆ ನೀಡಬಹುದಾಗಿದೆ. ಇದರಿಂದ ಕೋವಿಡ್ 19 ವೈರಸ್ ಅನ್ನು ಸಮರ್ಥವಾಗಿ ತಡೆಗಟ್ಟಬಹುದಾಗಿದೆ ಎಂದು ವರದಿ ಹೇಳಿದೆ.