ನವದೆಹಲಿ: ದೇಶದಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳಲ್ಲಿ ಸುಮಾರು ಶೇ 11ರಷ್ಟು ಜನರು 20 ವರ್ಷ ವಯಸ್ಸಿಗಿಂತ ಕಡಿಮೆ ವಯೋಮಾನದರು ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
2021ರ ಜುಲೈವರೆಗೆ 18 ವರ್ಷ ವಯೋಮಾನದೊಳಗಿನ ಎಷ್ಟು ಮಕ್ಕಳು ಕೊರೊನಾ ಸೋಂಕಿಗೀಡಾಗಿದ್ದಾರೆ ಎನ್ನುವ ಕುರಿತು ಕೇಳಲಾದ ಪ್ರಶ್ನೆಗೆ ಅವರು ಮಾಹಿತಿ ನೀಡಿದರು.
'ಮಕ್ಕಳಿಗಾಗಿ ಕೋವಿಡ್ ಲಸಿಕೆ ತಯಾರಿಸುವ ಪ್ರಕ್ರಿಯೆಯು ಪ್ರಾಯೋಗಿಕ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲು ಹೈದರಾಬಾದ್‌ನ ಭಾರತ್ ಬಯೊಟೆಕ್ ಮತ್ತು ಅಹಮದಾಬಾದ್‌ನ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ಗೆ ಅನುಮತಿ ನೀಡಲಾಗಿದೆ' ಎಂದೂ ಅವರು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಕೋವಿಡ್: 2,903 ರೈಲ್ವೆ ಉದ್ಯೋಗಿಗಳ ಮರಣ
ಕೋವಿಡ್-19ನಿಂದಾಗಿ ರೈಲ್ವೆ ಇಲಾಖೆಯ ಒಟ್ಟು 2,903 ನೌಕರರು ಸಾವಿಗೀಡಾಗಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.
ಮೃತರಲ್ಲಿ ಇದುವರೆಗೆ 2,782 ನೌಕರರ ಕುಟುಂಬಗಳಿಗೆ ತಲುಪಬೇಕಾದ ಬಾಕಿ ಹಣವನ್ನು ನೀಡಲಾಗಿದೆ ಎಂದೂ ಅವರು ತಿಳಿಸಿದರು.