ನವದೆಹಲಿ: ಭಾರತದ ಕೋವಿಡ್-19 ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ 25 ಮಿಲಿಯನ್ ಡಾಲರ್ ಆರ್ಥಿಕ ನೆರವು ಒದಗಿಸುವುದಾಗಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಪ್ರಕಟಿಸಿದ್ದಾರೆ.
ನಿನ್ನೆಯಿಂದ ಭಾರತ ಪ್ರವಾಸ ಕೈಗೊಂಡಿರುವ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಭಯ ದೇಶಗಳ ನಾಯಕರು ಹಲವು ಮಾತುಗಳನ್ನು ನಡೆಸಿದ್ದು ಕೋವಿಡ್ ಸಾಂಕ್ರಾಮಿಕ ಮತ್ತು ಅದರಿಂದಾಗಿರುವ ನಕಾರಾತ್ಮಕ ಪರಿಣಾಮಗಳನ್ನು ನಿರ್ವಹಿಸುವ ಕುರಿತು ಮತ್ತಷ್ಟು ಸಹಕಾರಕ್ಕೆ ಉತ್ತೇಜನ ನೀಡುವ ಸಂಬಂಧ ಚರ್ಚೆ, ಮಾತುಕತೆ ನಡೆಸಿದ್ದಾರೆ.
ಬ್ಲಿಂಕನ್ ಅವರ ಜೊತೆಗೆ ಸವಿಸ್ತಾರವಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಅಮೆರಿಕ ಭಾರತಕ್ಕೆ ತೋರಿದ ವಿಶೇಷ ನೆರವನ್ನು ಪ್ರಸ್ತಾಪಿಸಿ ಧನ್ಯವಾದ ಹೇಳಿದರು. ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಅಮೆರಿಕ ನೀಡುತ್ತಿರುವ ಕಚ್ಚಾ ಸಾಮಗ್ರಿಗಳ ಪೂರೈಕೆ ಮಾಡಿದ ಅಮೆರಿಕಕ್ಕೆ ವಿದೇಶಾಂಗ ಸಚಿವರು ಧನ್ಯವಾದ ಹೇಳಿದರು.