ನವದೆಹಲಿ: ಮನೆಯಲ್ಲಿಯೇ ಕೋವಿಡ್-19 ಪರೀಕ್ಷೆ ಮಾಡಿಕೊಳ್ಳುವ ಕಿಟ್‌ಗಳ ಭರಾಟೆ ಶುರುವಾಗಿದೆ. ಇದೀಗ ಮತ್ತೊಂದು ಪ್ರಮುಖ ಹೆಲ್ತ್‌ಕೇರ್ ಸಂಸ್ಥೆ ಆಯಬಟ್ (Abbott), ಸಾರ್ಸ್-ಕೋವ್-2 ವೈರಸ್ ಪತ್ತೆಗಾಗಿ ಮನೆಯಲ್ಲಿಯೇ ಬಳಸಬಹುದಾದ ಕಿಟ್ ಅನ್ನು ಭಾರತದಲ್ಲಿ ಹೊರತಂದಿದೆ.
ಪ್ರತಿ ಕಿಟ್ ಮೂಲಕ ಒಂದು ಬಾರಿ ಮಾತ್ರ ಕೋವಿಡ್-19 ರ್‍ಯಾಪಿಡ್ ಆಯಂಟಿಜೆನ್ ಪರೀಕ್ಷೆ ನಡೆಸಬಹುದಾಗಿದ್ದು, ಕಿಟ್‌ನ ಬೆಲೆ 325 ನಿಗದಿಯಾಗಿದೆ. ವಯಸ್ಕರು ಮತ್ತು ಮಕ್ಕಳು ಸಹ ಈ ಕಿಟ್ ಮೂಲಕ ಕೋವಿಡ್ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. 'ಭಾರತದ ನಗರ ಮತ್ತು ಗ್ರಾಮೀಣ ಭಾಗಗಳ ಆರೋಗ್ಯ ಸುರಕ್ಷತೆ ವ್ಯವಸ್ಥೆಯ ಮೇಲಿನ ಒತ್ತಡವನ್ನು ಈ ಕಿಟ್‌ಗಳ ಬಳಕೆಯು ಕಡಿಮೆ ಮಾಡಬಹುದಾಗಿದೆ' ಎಂದು ಆಯಬಟ್ ಪ್ರಕಟಣೆಯಲ್ಲಿ ತಿಳಿಸಿದೆ.
ರೋಗ ಲಕ್ಷಣಗಳು ಇರುವವರು ಅಥವಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದವರೂ ಮನೆಯಲ್ಲಿಯೇ ಪರೀಕ್ಷೆ ಮಾಡಿಕೊಳ್ಳುವುದರಿಂದ ಸಮುದಾಯದಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಯಬಹುದಾಗಿದೆ. 'ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರ್‍ಯಾಪಿಡ್ ಆಯಂಟಿಜೆನ್ ಪರೀಕ್ಷೆಯು ನಿರ್ಣಾಯಕವಾಗಿದೆ' ಎಂದು ಕಂಪನಿಯ ವಿಭಾಗೀಯ ಉಪಾಧ್ಯಕ್ಷ ಸಂಜೀವ್ ಜೋಹರ್ ಹೇಳಿದ್ದಾರೆ.
ಜುಲೈ ಅಂತ್ಯದ ವೇಳೆಗೆ ಮೊದಲ ಹಂತದಲ್ಲಿ 70 ಲಕ್ಷ ಪರೀಕ್ಷೆ ಕಿಟ್‌ಗಳನ್ನು ಪೂರೈಸುವ ಯೋಜನೆ ರೂಪಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ತಯಾರಿಕೆ ಸಾಮರ್ಥ್ಯ ಮತ್ತು ಪೂರೈಕೆ ಸಂಪರ್ಕ ಹೊಂದಿರುವ ಕಂಪನಿಯು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸುವುದಾಗಿ ಹೇಳಿದೆ.
ಒಂದು ಕಿಟ್ ಬೆಲೆ ₹ 325 ಆಗಿದ್ದು; ನಾಲ್ಕು ಕಿಟ್‌ಗಳ ಪ್ಯಾಕ್‌ಗೆ 1,250; 10 ಕಿಟ್‌ಗಳ ಪ್ಯಾಕ್‌ಗೆ 2,800 ಹಾಗೂ 20 ಕಿಟ್‌ಗಳ ಪ್ಯಾಕ್‌ಗೆ 5,400 ನಿಗದಿ ಪಡಿಸಿದೆ. ಈ ಕಿಟ್‌ಗಳು ಖರೀದಿಗೆ ನೇರವಾಗಿ ಹಾಗೂ ಆನ್‌ಲೈನ್ ಮೂಲಕವೂ ಲಭ್ಯವಾಗಲಿದೆ ಎಂದು ಆಯಬಟ್ ತಿಳಿಸಿದೆ.