ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಭಾರತದ ಮಧ್ಯಮವರ್ಗದ ಕುಟುಂಬದವರಿಗೆ ಮತ್ತಷ್ಟು ಹೊರೆಯಾಗಿದ್ದು, ವೈದ್ಯಕೀಯ ವೆಚ್ಚಗಳು ಈ ವರ್ಗದ ಜನತೆಯನ್ನು ಮತ್ತಷ್ಟು ಕಂಗೆಡಿಸಿದೆ.
ಸಾಮಾನ್ಯ ಭಾರತೀಯನ ಮೇಲೆ ಕೋವಿಡ್-19 ವೈದ್ಯಕೀಯ ಚಿಕಿತ್ಸೆ ವೆಚ್ಚಗಳಿಂದ ಉಂಟಾಗುತ್ತಿರುವ ಹೊರೆಯನ್ನು ವಿಶ್ಲೇಷಿಸಲು ಅಧ್ಯಯನವೊಂದನ್ನು ನಡೆಸಲಾಗಿದ್ದು, "ಅಗಾಧ ಮತ್ತು ನಿಭಾಯಿಸುವುದಕ್ಕೆ ಸಾಧ್ಯವಿಲ್ಲದಷ್ಟು" ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂದಿಯಾ ಹಾಗೂ ಡ್ಯೂಕ್ ಗ್ಲೋಬಲ್ ಹೆಲ್ತ್ ಇನ್ಸ್ಟಿಟ್ಯೂಟ್ ಜೊತೆಗೆ ಸಹಭಾಗಿತ್ವ ಹೊಂದಿರುವ ಸಂಶೋಧಕರ ಅಧ್ಯಯನದ ಪ್ರಕಾರ ಖಾಸಗಿ ಪ್ರಯೋಗಾಲಯಗಳಲ್ಲಿ ಪ್ರತಿ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆಗೆ 2,229 ರೂಪಾಯಿಗಳಾಗುತ್ತವೆ, ಸರ್ಕಾರಿ ಪ್ರಯೋಗಾಲಯಗಳಲ್ಲಿ ಉಚಿತವಾಗಿದೆ. ಮನೆಯಲ್ಲಿಯೇ ಐಸೊಲೇಷನ್ ನಲ್ಲಿರುವುದಕ್ಕೆ ಸರಾಸರಿ ವೆಚ್ಚ 829 ರೂಪಾಯಿಯಾಗಿದ್ದರೆ, 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಐಸೊಲೇಷನ್ ನಲ್ಲಿರುವುದಾದರೆ 67,470 ರೂಪಾಯಿ ಹಾಗೂ ಐಸಿಯುನಲ್ಲಿ ದಾಖಲಾಗಬೇಕಾದರೆ 128,110 ರೂಪಾಯಿ ಖರ್ಚಾಗುತ್ತದೆ.
ಆಸ್ಪತ್ರೆಯಲ್ಲಿ ಐಸೊಲೇಷನ್ ನಲ್ಲಿರಬೇಕಾದರೆ ಸಾಮಾನ್ಯ ಉದ್ಯೋಗಿಗಳು ತಮ್ಮ 124 ದಿನಗಳ ವೇತನವನ್ನು ತೆರಬೇಕಾಗುತ್ತಿತ್ತು. ಇನ್ನು ಸ್ವಯಂ ಉದ್ಯೋಗಿಗಳು ತಮ್ಮ 170 ದಿನಗಳ ವೇತನ ಹಾಗೂ ಕಾರ್ಮಿಕರು ತಮ್ಮ 257 ದಿನಗಳ ವೇತನವನ್ನು ತೆರಬೇಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಐಸಿಯು ನಲ್ಲಿ ಚಿಕಿತ್ಸೆ ಪಡೆಯಬೇಕಾದಲ್ಲಿ ಕಾರ್ಮಿಕರು, ಸಾಮಾನ್ಯ ಉದ್ಯೋಗಿಗಳು ಹಾಗೂ ಸ್ವಯಂ ಉದ್ಯೋಗಿಗಳು ಅನುಕ್ರಮವಾಗಿ 481 ದಿನಗಳು, 318 ದಿನಗಳು ಹಾಗೂ 232 ದಿನಗಳ ವೇತನವನ್ನು ಖರ್ಚು ಮಾಡಬೇಕಾಗುತ್ತದೆ.
ಈ ರೀತಿ ಕೋವಿಡ್ ಸೇವೆಗಳು ಕಾರ್ಮಿಕರಿಗೆ ಭರಿಸಲಾಗದ ಹೊರೆಯಾಗಿದ್ದು, ಶೇ.90 ರಷ್ಟು ಮಂದಿಗೆ ಆಸ್ಪತ್ರೆಯ ಐಸಿಯು ಸೇವೆಗಳನ್ನು ಪಡೆಯುವುದಕ್ಕೆ ವಾರ್ಷಿಕ ವೇತವನೂ ಸಾಲುವುದಿಲ್ಲ ಅಂತೆಯೇ ಶೇ.48 ರಷ್ಟು ಕಾರ್ಮಿಕರಿಗೆ ಆಸ್ಪತ್ರೆಯಲ್ಲಿನ ಐಸೊಲೇಷನ್ ಗೆ ವಾರ್ಷಿಕ ವೇತನ ಸಾಲುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಸಾಮಾನ್ಯ ಉದ್ಯೋಗಿಗಳ ಪೈಕಿ ಶೇ.51 ರಷ್ಟು ಮಂದಿಗೆ ಐಸಿಯು ದಾಖಲಾತಿಗೆ ವಾರ್ಷಿಕ ವೇತನ ಸಾಲುವುದಿಲ್ಲ ಹಾಗೂ ಶೇ.15 ರಷ್ಟು ಮಂದಿಗೆ ಆಸ್ಪತ್ರೆಯ ಐಸೊಲೇಷನ್ ವೆಚ್ಚ ಭರಿಸಲಾಗುವುದಿಲ್ಲ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.
ಸಾಮಾನ್ಯ ಭಾರತೀಯನ ಮನೆಯಲ್ಲಿ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಗಳಿಕೆಗಿಂತಲೂ ಹೆಚ್ಚಿನ ಹಣವನ್ನು 2020 ರ ಏಪ್ರಿಲ್ ಹಾಗೂ 2021 ರ ಮಾರ್ಚ್ ನಡುವೆ ಖರ್ಚು ಮಾಡಬೇಕಾಯಿತು. ಇದಕ್ಕಾಗಿ ಒಟ್ಟಾರೆ ಪಾವತಿಯಾದ ಮೊತ್ತ 34,000 ಕೋಟಿ ರೂಪಾಯಿಯಾಗಿದ್ದರೆ, ಇದೇ ಅವಧಿಯಲ್ಲಿ ಸರ್ಕಾರಕ್ಕೆ 30,000 ಕೋಟಿ ರೂಪಾಯಿ ಖರ್ಚಾಗಿದೆ.
ಸರ್ಕಾರಕ್ಕೆ ಎರಡನೇ ಅಲೆಯೊಂದರಲ್ಲೇ ಮೂರು ತಿಂಗಳ ಅವಧಿಗೆ ಅಂದಾಜು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಜೆಟ್ ಗಳನ್ನು ಒಟ್ಟುಗೂಡಿಸಿದ್ದರ ಪೈಕಿ ಶೇ.12 ರಷ್ಟು ಖರ್ಚಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.