ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡಲು ನೀಡಲಾಗುತ್ತಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪೆನಿಯ ಕೊವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಶೇಕಡಾ 77.8ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ. ಭಾರತ್ ಬಯೋಟೆಕ್ ಕಂಪೆನಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಜೊತೆ ಸೇರಿಕೊಂಡು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಕೋವಿಡ್-19 ಸೋಂಕಿನ ತೀವ್ರ ಲಕ್ಷಣಗಳನ್ನು ಹೊಂದಿರುವ ಜನರಿಗೆ ಕೊವಾಕ್ಸಿನ್ ಲಸಿಕೆ ಶೇಕಡಾ 93.4ರಷ್ಟು ಪರಿಣಾಮಕಾರಿಯಾಗಿ ಮತ್ತು ಕೋವಿಡ್-19 ಸೋಂಕು ಇದ್ದು ಲಕ್ಷಣಗಳನ್ನು ಹೊಂದಿಲ್ಲದಿರುವ ವ್ಯಕ್ತಿಗಳಿಗೆ ಶೇಕಡಾ 63.6ರಷ್ಟು ಪರಿಣಾಮಕಾರಿ ಎಂದು ಪ್ರಾಯೋಗಿಕ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಇತ್ತೀಚೆಗೆ ಬಂದಿರುವ ಕೊರೋನಾ ರೂಪಾಂತರಿ ಡೆಲ್ಟಾ ಸೋಂಕಿಗೆ ಕೊವಾಕ್ಸಿನ್ ಶೇಕಡಾ 65.2ರಷ್ಟು ಪರಿಣಾಮಕಾರಿ ಎಂದು ಗೊತ್ತಾಗಿದೆ. ಜಗತ್ತಿನಾದ್ಯಂತ ಕೊರೋನಾ ರೂಪಾಂತರಿ ವೈರಸ್ ಡೆಲ್ಟಾ ಈಗ ಬಹಳವಾಗಿ ಕಾಡುತ್ತಿದೆ.
ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ಅದರ ಪರಿಣಾಮಗಳ ಬಗ್ಗೆ ಇಂದು ಭಾರತ್ ಬಯೋಟೆಕ್ ಸಂಸ್ಥೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಲಿದೆ. 130 ಮಂದಿ ಕೊರೋನಾ ಸೋಂಕಿನ ಲಕ್ಷಣ ಹೊಂದಿರುವವರ ಮೇಲೆ ಮೂರನೇ ಹಂತದ ಕೊವಾಕ್ಸಿನ್ ಪ್ರಯೋಗವನ್ನು ಸಂಸ್ಥೆ ಮಾಡಿದ್ದು, ಕೋವಾಕ್ಸಿನ್‌ನ 3ನೇ ಹಂತದ ಪ್ರಯೋಗಗಳು 130 ಮಂದಿ ಕೊರೋನಾ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಜನರ ಮೇಲೆ ನಡೆಸಲಾಗಿದೆ.
ಕೊವಾಕ್ಸಿನ್ ಲಸಿಕೆಯ ಎರಡನೇ ಡೋಸ್ ನಂತರ ಕನಿಷ್ಠ ಎರಡು ವಾರಗಳ ನಂತರ ದೇಶದ 25 ಕಡೆಗಳಲ್ಲಿ ಸಂಸ್ಥೆ ಪ್ರಯೋಗ ನಡೆಸಿದೆ.