ವಾಷಿಂಗ್ ಟನ್: ಕೋವಿಡ್-19 ಲಸಿಕೆ ತೆಗೆದುಕೊಂಡವರಲ್ಲಿಯೂ ಕೊರೋನ ಸೋಂಕು ಕಾಣಿಸಿಕೊಂಡಲ್ಲಿ ಅಂತಹ ವ್ಯಕ್ತಿಗೆಳಲ್ಲಿ ರೋಗಲಕ್ಷಣ, ವೈರಲ್ ಲೋಡ್, ತೀವ್ರತೆ ಕಡಿಮೆಯಾಗಲಿದೆ ಎಂದು ಎಂಆರ್ ಎನ್‌ಎ ಪ್ರಿವೆಂಟೀವ್ಸ್ ಎಂಬ ಅಧ್ಯಯನ ವರದಿಯಿಂದ ತಿಳಿದುಬಂದಿದೆ.
ಲಸಿಕೆ ಹಾಕಿಸಿಕೊಳ್ಳದವರಿಗೆ ಹೋಲಿಕೆ ಮಾಡರೆ ಲಸಿಕೆ ಹಾಕಿಸಿಕೊಂಡವರಿಗೆ ಸೋಂಕು ತಗುಲಿದಾಗ ಅವರಲ್ಲಿ ವೈರಾಣು ಪ್ರಮಾಣ ಕುಗ್ಗುತ್ತದೆ, ಸೋಂಕು ಬಾಧಿಸುವ ಅವಧಿ ಕಡಿಮೆ ಆಗಲಿದೆ ಹಾಗೂ ರೋಗ ಲಕ್ಷಣಗಳು ಸೌಮ್ಯವಾಗಿರಲಿವೆ ಎಂದು ಅಮೆರಿಕದ ಎಂಆರ್ ಎನ್‌ಎ ಪ್ರಿವೆಂಟೀವ್ಸ್ ಹೇಳಿದೆ.
ಸಂಶೋಧಕರ ಪ್ರಕಾರ ಕೋವಿಡ್-19 ಲಸಿಕೆಗಳು ಸೋಂಕು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಆದರೆ ಯಾವುದೇ ಲಸಿಕೆಗಳು ಶೇ.100 ರಷ್ಟು ಪರಿಣಾಮಕಾರಿಯಾಗಲು ಸಾಧ್ಯವಿರಲ್ಲ. ಲಸಿಕೆ ತೆಗೆದುಕೊಂಡ ಬಳಿಕವೂ ಸೋಂಕು ಬರುತ್ತವೆ ಎಂದು ಹೇಳಿದ್ದಾರೆ.
ಲಸಿಕೆ ತೆಗೆದುಕೊಂಡಲ್ಲಿ ಸೋಂಕು ತಗುಲುವ ಸಾಧ್ಯತೆ ಶೇ.90 ರಷ್ಟು ಇರುವುದಿಲ್ಲ. ಒಂದು ವೇಳೆ ಬಂದಲ್ಲೂ ವೈರಾಣು ಕಡಿಮೆ ಪ್ರಮಾಣದಲ್ಲಿರುತ್ತವೆ ಹಾಗೂ ರೋಗಲಕ್ಷಣಗಳು ಸೌಮ್ಯವಾಗಿರಲಿವೆ ಎಂದು ಯೂನಿವರ್ಸಿಟಿ ಆಫ್ ಅರಿಝೋನಾ ಆರೋಗ್ಯ ವಿಜ್ಞಾನ ವಿಭಾಗದ ಪ್ರೊಫೆಸರ್ ಜೆಫ್ ಬರ್ಗೆಸ್ ತಿಳಿಸಿದ್ದಾರೆ.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸನ್ ನಲ್ಲಿ ಜೂ.30 ರಂದು ಈ ಅಧ್ಯಯನ ವರದಿ ಪ್ರಕಟಗೊಂಡಿದ್ದು 3,975 ಆರೋಗ್ಯ ಕೇರ್ ಸಿಬ್ಬಂದಿಗಳು, ಫರ್ಸ್ಟ್ ರೆಸ್ಪಾಂಡರ್ಸ್, ಇನ್ನಿತರ ಮುನ್ನೆಲೆ ಕಾರ್ಯಕರ್ತರು ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದರು.
ಡಿ.14, 2020 ರಿಂದ ಏಪ್ರಿಲ್.14, 2021 ವರೆಗೂ ಈ ಅಧ್ಯಯನದ ಭಾಗವಾಗಿದ್ದವರು ಪ್ರತಿ ವಾರವೂ SARS-CoV-2 ಟೆಸ್ಟಿಂಗ್ ಗೆ ಒಳಪಟ್ಟಿದ್ದರು. ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರ ಪೈಕಿ 5 ಮಂದಿಗೆ ಹಾಗೂ ಭಾಗಶಃ ಲಸಿಕೆ ಹಾಕಿಸಿಕೊಂಡ 11 ಮಂದಿಗೆ ಹಾಗೂ 156 ಮಂದಿ ಲಸಿಕೆ ಹಾಕಿಸಿಕೊಳ್ಳದೇ ಇದ್ದವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.
ಲಸಿಕೆ ಹಾಕಿಸಿಕೊಳ್ಳದವರಿಗೆ ಹೋಲಿಕೆ ಮಾಡಿದರೆ ಫೈಜರ್, ಹಾಗೂ ಮಾಡೆರ್ನ ಮೆಸೆಂಜರ್ ಆರ್ ಎನ್‌ಎ ಲಸಿಕೆಗಳನ್ನು ಸೋಂಕು ಅವಧಿಯಲ್ಲಿ ಪಡೆದವರಲ್ಲಿ ವೈರಲ್ ಲೋಡ್ ಶೇ.40 ರಷ್ಟು ಕಡಿಮೆ ಇತ್ತು. ರೋಗನಿರೋಧಕ ವ್ಯವಸ್ಥೆಯನ್ನು ಕೊರೋನಾ ವಿರುದ್ಧ್ ಹೋರಾಡಲು ಅಣಿಗೊಳಿಸುವುದಕ್ಕೆ ಎಂಆರ್ ಎನ್‌ಎ ಲಸಿಕೆಗಳು ಪಾಥೋಜನ್ ಗಳ ಬದಲು ಮೆಸೆಂಜರ್ ಆರ್ ಎನ್‌ಎ (ಅಥವಾ mRNA) ಎಂಬ ಅಣುವನ್ನು ಬಳಕೆ ಮಾಡಿಕೊಳ್ಳುತ್ತವೆ.
ಎರಡು ಡೋಸ್ ಗಳ ಎಂಆರ್ ಎನ್‌ಎ ಕೋವಿಡ್-19 ಲಸಿಕೆಗಳು ಶೇ.91 ರಷ್ಟು SARS-CoV-2 ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತವೆ. ಒಂದೇ ಡೋಸ್ ಲಸಿಕೆ ಶೇ.81 ರಷ್ಟು ಪರಿಣಾಮಕಾರಿಯಾಗಿರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.