ಜಿನಿವಾ: ಕೋವಿಡ್-19 ವೈರಸ್ ನ ಹೊಸ ರೂಪಾಂತರ ತಳಿಗಳು ಪ್ರಪಂಚದಾದ್ಯಂತ ಹರಡುವ ಅಪಾಯವಿದ್ದು, ಮುಂದಿನ ದಿನಗಳಲ್ಲಿ ಪ್ರಬಲವಾಗಿ ಪೀಡಿಸುವ ಅಪಾಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿಯು, 'ಕೋವಿಡ್-19 ವೈರಸ್ ನ ಹೊಸ ರೂಪಾಂತರ ತಳಿಗಳು ಪ್ರಪಂಚದಾದ್ಯಂತ ಹರಡುವ ಅಪಾಯವಿದ್ದು, ಮುಂದಿನ ದಿನಗಳಲ್ಲಿ ಪ್ರಬಲವಾಗಿ ಪೀಡಿಸುವ ಅಪಾಯವಿದೆ. ಇದು ಸಾಂಕ್ರಾಮಿಕ ರೋಗ ತಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಿದೆ.
ಸಮಿತಿಯ ಅಧ್ಯಕ್ಷ ಡಿಡಿಯರ್ ಹೌಸಿನ್ ಅವರು ಮಾತನಾಡಿದ್ದು, 'ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಕುರಿತು ನಡೆದ ಸಭೆಯ ನಂತರ ಸಮಿತಿಯು ಈ ಎಚ್ಚರಿಕೆ ನೀಡಿದ್ದು, ಕೋವಿಡ್‌ಗೆ ಸಂಬಂಧಿಸಿದ ಇತ್ತೀಚಿನ ಪ್ರವೃತ್ತಿಗಳು ಚಿಂತೆಗೀಡು ಮಾಡಿವೆ. ಒಂದೂವರೆ ವರ್ಷದ ಹಿಂದೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಆದರೆ, ಈಗಲೂ ಅದೇ ಪರಿಸ್ಥಿತಿಯಲ್ಲೇ ಮುಂದುವರಿದಿದೆ. ಸದ್ಯಕ್ಕೆ ಕೋವಿಡ್-19ನ ನಾಲ್ಕು ರೂಪಾಂತರಗಳು ಜಾಗತಿಕವಾಗಿ ಆತಂಕ ಉಂಟು ಮಾಡಿವೆ. ಆಲ್ಫಾ, ಬೀಟಾ, ಗಾಮಾ ಮತ್ತು ವಿಶೇಷವಾಗಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ, ಅತಿ ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರಗಳು ಪ್ರಾಬಲ್ಯ ಸಾಧಿಸಿವೆ ಎಂದು ಅವರು ತಿಳಿಸಿದರು.
ದೊಡ್ಡ ತಲೆನೋವಾಗಿರುವ ಕ್ರೀಡಾಕೂಟಗಳು, ಪ್ರವಾಸಿ ತಾಣಗಳು
'ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗಬಹುದು. ಹೊಸ ಆತಂಕಕಾರಿ ರೂಪಾಂತರ ತಳಿಗಳು ಉದ್ಘವಿಸಬಹುದು. ಅವುಗಳ ಕಾರಣದಿಂದಾಗಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗಬಹುದು. ಪ್ರಮುಖವಾಗಿ ಸಾಮೂಹಿಕವಾಗಿ ಜನಸಂದಣಿ ಸೇರುವ ಕ್ರೀಡಾಕೂಟಗಳು ಪ್ರವಾಸಿತಾಣಗಳು ಸೋಂಕು ಪ್ರಸರಣಕ್ಕೆ ಮೂಲಗಳಾಗಬಹುದು. ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಪ್ರಾರಂಭೋತ್ಸವಕ್ಕೆ ಕೇವಲ ವಾರಗಳ ಸಮಯವಿರುವಂತೆಯೇ ಟೋಕಿಯೋದಲ್ಲಿ ಕಳೆದೊಂದು ವಾರದಲ್ಲಿ 1,308 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದು ಟೋಕಿಯೋದಲ್ಲಿ ಜನವರಿ ಬಳಿಕ ದಾಖಲಾದ ಅತಿ ಹೆಚ್ಚು.ಸೋಂಕು ಪ್ರಕರಣಗಳಾಗಿವೆ. ಅಷ್ಟು ಮಾತ್ರವಲ್ಲದೇ ಜಪಾನ್‌ನಲ್ಲಿ ಒಬ್ಬ ಕ್ರೀಡಾಪಟು ಮತ್ತು ಐದು ಒಲಿಂಪಿಕ್ ಕಾರ್ಮಿಕರು, ಗುತ್ತಿಗೆದಾರರು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದಾರೆ.
ಅಂತೆಯೇ ಬ್ರೆಜಿಲ್ ನ ಒಲಿಂಪಿಕ್ ಜೂಡೋ ತಂಡದ ಹೋಸ್ಟಿಂಗ್ ನಲ್ಲಿ ಎಂಟು ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ರಷ್ಯಾದ ರಗ್ಬಿ ಸೆವೆನ್ಸ್ ತಂಡದ ಸಿಬ್ಬಂದಿಗಳನ್ನೂ ಕೂಡ ಸೋಂಕಿಗೆ ತುತ್ತಾದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಲ್ವರ್‌ಸ್ಟೋನ್ ಟೂರ್ನಿಗೂ ಮುನ್ನ ಮೆಕ್ಲಾರೆನ್ ಫಾರ್ಮುಲಾ ಒನ್ ತಂಡದ ಮೂವರು ಸದಸ್ಯರು ಸೋಂಕಿಗೆ ತುತ್ತಾಗಿದ್ದರು. ಅಷ್ಟು ಮಾತ್ರವಲ್ಲ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಭಾರತ ತಂಡ ಸಿದ್ಧವಾಗುತ್ತಿದ್ದಂತೆಯೇ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಸೋಂಕಿಗೆ ತುತ್ತಾಗಿದ್ದಾರೆ.
ಆಫ್ರಿಕಾದಲ್ಲಿ ಹೆಚ್ಚಾದ ಸಾವುಗಳ ಸಂಖ್ಯೆ
ಕೋವಿಡ್ ರೂಪಾಂತರ ವೈರಸ್ ಗಳಿಂದಾಗಿ ಆಫ್ರಿಕಾದಲ್ಲಿ ಸಾವುಗಳ ಪ್ರಮಾಣ ಹೆಚ್ಚಾಗಿದೆ. ಆಫ್ರಿಕಾ ಮಾತ್ರವಲ್ಲದೇ ಪ್ರಮುಖವಾಗಿ ಆರೋಗ್ಯ ಮೂಲಸೌಕರ್ಯಗಳು ಮತ್ತು ಲಸಿಕೆ ಉರುಳಿಸುವ ಸಾಮರ್ಥ್ಯಗಳು ಸೀಮಿತವಾಗಿರುವ ದೇಶಗಳು ನಿರ್ದಿಷ್ಟ ಒತ್ತಡದಲ್ಲಿದ್ದು, ರುವಾಂಡಾ ರಾಜಧಾನಿ ಕಿಗಾಲಿ ಮತ್ತು ಇತರ ಎಂಟು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಗಣನೀಯವಾಗಿ ಹೆಚ್ಚಾದ ಹಿನ್ನಲೆಯಲ್ಲಿ ಇಲ್ಲಿ ಶನಿವಾರದಿಂದ ಲಾಕ್‌ಡೌನ್ ಮಾಡಲು ಸ್ಥಳೀಯ ಆಡಳಿತ ನಿರ್ಧರಿಸಿದೆ.