ನವದೆಹಲಿ: ಈ ಬಾರಿಯ ಸಂಸತ್ ಮುಂಗಾರು ಅಧಿವೇಶನ ಜುಲೈ19 ಕ್ಕೆ ಪ್ರಾರಂಭವಾಗಲಿದ್ದು, ಆಗಸ್ಟ್ 13 ರಂದು ಮುಕ್ತಾಯವಾಗಲಿದೆ. 17 ನೇ ಲೋಕಸಭೆಯ ಆರನೇ ಅಧಿವೇಶನ ಜುಲೈ 19 ರಂದು ಪ್ರಾರಂಭವಾಗಲಿದ್ದು, ಸರ್ಕಾರಿ ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟು ಅಧಿವೇಶನ ಆಗಸ್ಟ್ 13 ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಲೋಕಸಭಾ ಪ್ರಕಟಣೆ ತಿಳಿಸಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜುಲೈ 19 ರಂದು ಸದನವನ್ನು ಕರೆದಿದ್ದು, ಅಧಿವೇಶನ ಆಗಸ್ಟ್ 13ರವರೆಗೂ ಮುಂದುವರೆಯಲಿದೆ ಎಂದು ರಾಜ್ಯಸಭೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಪಿಎ) ಈ ಹಿಂದೆ ಅಧಿವೇಶನ ನಡೆಸಲು ದಿನಾಂಕಗಳನ್ನು ಶಿಫಾರಸು ಮಾಡಿತ್ತು. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು , ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ನಂತರ ಇದು ಮೊದಲ ಸಂಸತ್ ಅಧಿವೇಶನವಾಗಿದೆ.
ಈ ವರ್ಷದ ಆರಂಭದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ತರಂಗಕ್ಕೆ ಹೋಲಿಸಿದರೆ ಪ್ರಕರಣಗಳು ತೀವ್ರ ಕುಸಿತ ಕಂಡಿದ್ದರಿಂದ ದೇಶದಲ್ಲಿ ಕೋವಿಡ್ -19 ಪರಿಸ್ಥಿತಿ ತಿಳಿಯಾಗಿದ್ದು, ವ್ಯಾಕ್ಸಿನೇಷನ್ ಡ್ರೈವ್ ಅನ್ನು ಸಹ ಹೆಚ್ಚಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮುಂಗಾರು ಅಧಿವೇಶನ ನಡೆದಿದ್ದು, ಚಳಿಗಾಲದ ಅಧಿವೇಶನ ನಡೆದಿರಲಿಲ್ಲ.