ಕಾಸರಗೋಡು: ಜಿಲ್ಲೆಯ 19 ಪಂಚಾಯತಿಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಲಾಗಿದೆ. ಬದಿಯಡ್ಕ, ಮಧೂರು, ಕುಂಬಳೆ, ಎಣ್ಮಕಜೆ, ಮೊಗ್ರಾಲ್ ಪುತ್ತೂರು, ಉದುಮ, ವೆಸ್ಟ್ ಎಳೇರಿ, ಮಡಿಕೈ, ಕಳ್ಳಾರ್, ಕೋಡೋಂ ಬೆಳ್ಳೂರು, ಚೆಮ್ನಾಡ್, ಕಿನಾರೂರು-ಕೆರಿಂದಳ, ಚೆಂಗಳ, ಅಜಾನೂರು, ಪುಲ್ಲೂರು-ಪೆರಿಯ, ಪಿಲಿಕ್ಕೋಡ್, ಪಳ್ಳಿಕ್ಕೆರೆ ಎಂಬ ಗ್ರಾ.ಪಂ. ಹಾಗೂ ಕಾಞಂಗಾಡ್ ನಗರಸಭೆಯಲ್ಲಿ ಟ್ರಿಪಲ್ ಲಾಕ್ ಡೌನ್ ಹೇರಲಾಗಿದೆ. ಇಲ್ಲಿ ಟಿಪಿಆರ್ ಶೇ.15ಕ್ಕಿಂತಲೂ ಮೇಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವ್ಯಾಪಾರ ವಹಿವಾಟು ಮತ್ತೆ ಸ್ತಬ್ದ:
ಬುಧವಾರ ಬೆಳಿಗ್ಗೆ 10 ವೇಳೆಗೆ ಈ ಟ್ರಿಪಲ್ ಲಾಕ್ ಡೌನ್ ಆದೇಶ ಹೊರಬಿದ್ದಿದ್ದು, ಬೆಳಿಗ್ಗಿನಿಂದಲೇ ಅಂಗಡಿಗಳನ್ನು ತೆರೆದು ವಹಿವಾಟುಇ ಆರಂಭಿಸಿದ ಅಂಗಡಿ-ಮುಗ್ಗಟ್ಟುಗಳನ್ನು ತಕ್ಷಣ ಮುಚ್ಚುವಂತೆ ಪೋಲೀಸರು ಎಚ್ಚರಿಕೆ ನೀಡಿದರು. ಗಲಿಬಿಲಿಗೊಳಗಾದ ವ್ಯಾಪಾರಿಗಳು ಹತಾಶೆಯಿಂದ ಅಂಗಡಿಗಳನ್ನು ಮುಚ್ಚಿದರು. ಜನ ಸಂಚಾರವನ್ನೂ ನಿಯಂತ್ರಿಸಲಾಯಿತು. ಈ ವೇಳೆ ಹಠಾತ್ ಆದ ಬದಲಾವಣೆಯಿಂದ ಜನರು ಗಲಿಬಿಲಿಗೊಳಗಾದರು.
ಟಿಪಿಆರ್ ನಿರ್ಣಯದಲ್ಲಿ ಅಸಮರ್ಪಕತೆ!:
ಪ್ರಸ್ತುತ ಸರ್ಕಾರ ಮಂಗಳವಾರದಿಂದ ಹೊರಡಿಸಿದ ಹೊಸ ಮಾನದಂಡಾನುಸಾರ ಇನ್ನು ಸ್ಥಳೀಯಾಡಳಿತ ವ್ಯಾಪ್ತಿಗಳಲ್ಲಿ ಟಿಪಿಆರ್ ಆಧಾರಿತವಾದ ಲಾಕ್ ಡೌನ್ ಗಳು ಇರಲಿದೆ. ಆದರೆ ಈ ಟಿಪಿಆರ್ ಆಧಾರಿತ ನಿಯಂತ್ರಣ ವ್ಯವಸ್ಥೆ ಅಸಮರ್ಪಕ ಕಟ್ಟುಪಾಡುಗಳಿಂದ ಕೂಡಿವೆ ಎಂದು ಆರೋಪಗಳೂ ಕೇಳಿಬಂದಿದೆ.
ಪ್ರತಿ ಗ್ರಾ.ಪಂ. ವ್ಯಾಪ್ತಿಯ ಗಡಿಗಳಲ್ಲಿ ತಮ್ಮ ಪಕ್ಕದ ಆರೋಗ್ಯ ಕೇಂದ್ರಕ್ಕೆ ತೆರಳಿ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದು, ಇದರ ಫಲಿತಾಂಶ ಯಾವ ಕೇಂದ್ರದಲ್ಲಿ ಪರೀಕ್ಷೆಗಳಿಗೊಳಪಡುತ್ತೇವೆಯೋ ಅಲ್ಲಿಗೆ ದಾಖಲಾಗುತ್ತದೆ. ಉದಾಹರಣೆಗೆ ಕುಂಬ್ಡಾಜೆ ವ್ಯಾಪ್ತಿಯ ವ್ಯಕ್ತಿಯೊಬ್ಬ ಕಾರಡ್ಕದ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ ಅದರ ವರದಿ ಕಾರಡ್ಕ ವ್ಯಾಪ್ತಿಗೆ ಸೇರಿಸಲ್ಪಡುತ್ತದೆ. ಇದರಿಂದ ಒಮ್ಮಿಂದೊಮ್ಮೆಗೆ ಆರೋಗ್ಯ ಕೇಂದ್ರವಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋವಿಡ್ ತೀವ್ರ ಏರಿಕೆಯ ವರದಿಯಾಗಿ ಅಲ್ಲಿ ಲಾಕ್ ಡೌನ್ ಹೇರಲ್ಪಡುತ್ತಿದೆ. ಇಂತಹ ವ್ಯವಸ್ಥೆ ಅವೈಜ್ಞಾನಿಕ ಮತ್ತು ಸ್ವೀಕಾರಾರ್ಹವಲ್ಲ ಎಂದು ಸಾರ್ವಜನಿಕರು ಕುಪಿತರಾಗಿದ್ದಾರೆ.