ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಇತ್ತೀಚಿನ ಸುತ್ತಿನ ಸೆರೋಸರ್ವೆಯ ವಿವರಗಳನ್ನು ಬಹಿರಂಗಗೊಳಿಸಿದ್ದು, ದೇಶದ ಜನಸಂಖ್ಯೆಯ ಪೈಕಿ 6 ವರ್ಷಗಳ ಮೇಲ್ಪಟ್ಟ ಶೇ.67.6 ರಷ್ಟು ಮಂದಿ ಈಗಾಗಲೇ ಕೋವಿಡ್-19 ಸೋಂಕಿಗೆ ತೆರೆದುಕೊಂಡಿದ್ದಾರೆ ಎಂದು ಹೇಳಿದೆ.
ಭಾರತದ ಜನಸಂಖ್ಯೆ ಅಂದಾಜು 135 ಕೋಟಿ ಇದ್ದು, ಐಸಿಎಂಆರ್ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ 90 ಕೋಟಿ ಭಾರತೀಯರಿಗೆ ಅಥವಾ ಮೂವರು ಭಾರತೀಯರ ಪೈಕಿ ಇಬ್ಬರಿಗೆ ಈಗಾಗಲೇ ಕೋವಿಡ್-19 ಸೋಂಕು ತಗುಲಿದೆ, 40-45 ಕೋಟಿ ಮಂದಿ ಇನ್ನೂ ಸೋಂಕಿಗೆ ದುರ್ಬಲರಾಗಿರುವ ಸಾಧ್ಯತೆ ಇದೆ ಎಂದು ಐಸಿಎಂಆರ್ ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಜುಲೈ ತಿಂಗಳಲ್ಲಿ ಮೂರು ಕೋಟಿಯಷ್ಟು ಕೋವಿಡ್-19 ಪ್ರಕರಣಗಳು ಮಾತ್ರವೇ ವರದಿಯಾಗಿದ್ದು ದೃಢಪಟ್ಟ ಪ್ರತಿ ಪ್ರಕರಣಕ್ಕೂ 30 ಸೋಂಕುಗಳ ಪತ್ತೆ ದಾಖಲೆಯಾಗುವುದರಿಂದ ತಪ್ಪಿದೆ.
ಜೂನ್ ಮಾಸಾಂತ್ಯದ ಕೊನೆಯ ಹಾಗೂ ಜುಲೈ ನ ಮೊದಲ ವಾರದ 10 ದಿನಗಳಲ್ಲಿ ಸೆರೋ ಸರ್ವಿಜಿಲೆನ್ಸ್ ನಡೆಸಲಾಗಿದ್ದು, 21 ರಾಜ್ಯಗಳ 70 ಜಿಲ್ಲೆಗಳಿಂದ 29,000 ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದ್ದು 45-59 ವಯಸ್ಸಿನವರಲ್ಲಿ ಶೇ.77.6 ರಷ್ಟು ಕೋವಿಡ್-19 ವಿರುದ್ಧದ ಪ್ರತಿಕಾಯಗಳು ಹೆಚ್ಚಾಗಿರುವುದು ಪತ್ತೆಯಾಗಿದೆ.
ಐಸಿಎಂಆರ್ ನ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಜು.20 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಸಿರೊಪ್ರೆವೆಲೆನ್ಸ್ (ಪ್ರತಿಕಾಯಗಳ ಮಟ್ಟ) ಪ್ರತಿಕಾಯಗಳೊಂದಿಗೆ ಗ್ರಾಮೀಣ ಭಾಗಕ್ಕಿಂತ (ಶೇ.66.7) ನಗರ ಪ್ರದೇಶಗಳಲ್ಲಿ (ಶೇ.69.6) ರಷ್ಟು ಸ್ವಲ್ಪ ಹೆಚ್ಚಿನ ಪ್ರಮಾಣದ್ಲಲಿರುವುದು ಬಹಿರಂಗಗೊಂಡಿದೆ.
2020 ರ ಜೂನ್ ನಲ್ಲಿ ನಡೆದ ಮೊದಲ ರಾಷ್ಟ್ರೀಯ ಸೆರೋಸರ್ವೇಯಲ್ಲಿ ದೇಶದಲ್ಲಿ ಒಟ್ಟಾರೆ ಶೇ.1 ಕ್ಕಿಂತ ಕಡಿಮೆ ಸೆರೋಪಾಸಿಟಿವಿಟಿ ಇತ್ತು, ಈಗ ಈ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ.
2020 ರ ಡಿಸೆಂಬರ್-2021 ರ ಜನವರಿಯಲ್ಲಿ ನಡೆದಿದ್ದ ಈ ಹಿಂದಿನ ಸೆರೋಸರ್ವೆಯಲ್ಲಿ ಶೇ.24.1 ರಷ್ಟು ಭಾರತೀಯರಿಗೆ ಪ್ರತಿಕಾಯಗಳಿರುವುದು ಪತ್ತೆಯಾಗಿತ್ತು. ಸಣ್ಣ ಆಶಾಕಿರಣ ಇದೆ, ಆದರೆ ಸಮಾಧಾನ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಭಾರ್ಗವ ಎಚ್ಚರಿಸಿದ್ದಾರೆ.
ಇದೇ ವೇಳೆ 6-17 ವರ್ಷಗಳ ಮಕ್ಕಳ ಪೈಕಿ ಅರ್ಧದಷ್ಟು ಮಕ್ಕಳು ಈಗಾಗಲೇ ಸೆರೋಪಾಸಿಟೀವ್ ಆಗಿರುವುದು ವರದಿಯಿಂದ ತಿಳಿದುಬಂದಿದೆ. ಶೇ.85 ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಪ್ರತಿಕಾಯಗಳಿದೆ, ಆದರೆ 10 ನೇ 1 ರಷ್ಟು ಆರೋಗ್ಯ ಕಾರ್ಯಕರ್ತರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ.
ಒಂದು ಅಥವಾ ಎರಡು ಡೋಸ್ ಗಳ ಕೋವಿಡ್-19 ಲಸಿಕೆಗಳನ್ನು ಪಡೆದವರೂ ಸಮೀಕ್ಷೆಯ ಭಾಗವಾಗಿರುವುದು ಗಮನಾರ್ಹ ಸಂಗತಿ. 12,607 ಮಂದಿ ಲಸಿಕೆ ಪಡೆಯದ ವಯಸ್ಕರ ಪೈಕಿ ಶೇ.62.3 ರಷ್ಟು ಮಂದಿಗೆ ಪ್ರತಿಕಾಯಗಳಿದ್ದವು, ಒಂದು ಡೋಸ್ ಲಸಿಕೆ ಪಡೆದವರಲ್ಲಿ ಶೇ.81 ರಷ್ಟು ಮಂದಿಗೆ, ಎರಡೂ ಡೋಸ್ ಗಳನ್ನು ಪಡೆದವರಲ್ಲಿ ಶೇ.89.8 ರಷ್ಟು ಮಂದಿಗೆ ಪ್ರತಿಕಾಯಗಳು ಅಭಿವೃದ್ಧಿಯಾಗಿದೆ.