ನವದೆಹಲಿ: ಎಟಿಎಂನಿಂದ ಬ್ಯಾಂಕ್ ವಿತ್‌ಡ್ರಾಗೆ ಸಂಬಂಧಿಸಿದಂತೆ ಇದಾಗಲೇ ಹಲವಾರು ಬಾರಿ ಬದಲಾವಣೆಗಳನ್ನು ಮಾಡಲಾಗಿದೆ. ಈಗ ಪುನಃ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಗ್ರಾಹಕರಿಂದ ಹೆಚ್ಚುವರಿ ಹಣದ ವಸೂಲಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ.
ಈ ಹೊಸ ನಿಯಮ ಬರುವ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ಅದೇನೆಂದರೆ ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಬಾರಿ ಉಚಿತವಾಗಿ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಇದು ಹಣಕಾಸು ಮತ್ತು ಹಣಕಾಸುಯೇತರ ವಹಿವಾಟುಗಳನ್ನು ಒಳಗೊಂಡಿದೆ. ತಮ್ಮದಲ್ಲದ ಬ್ಯಾಂಕ್‌ನಿಂದ ಅಂದರೆ ಬೇರೆ ಬ್ಯಾಂಕ್‌ಗಳ ಎಟಿಎಂನಿಂದ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವುದಾದರೆ ಮಹಾನಗರಗಳಲ್ಲಿ ಮೂರು ಬಾರಿ ಮಾತ್ರ ಅರ್ಹರಾಗಿದ್ದು, ಗ್ರಾಮೀಣ ಭಾಗದಲ್ಲಿ ಐದು ಬಾರಿ ಉಚಿತವಾಗಿ ವಿತ್‌ಡ್ರಾಗೆ ಅರ್ಹರಾಗಿರುತ್ತಾರೆ.
ಒಂದು ವೇಳೆ ಇದನ್ನು ಮೀರಿ ವಹಿವಾಟು ನಡೆಸಿದರೆ ಪ್ರತಿಯೊಂದು ವಹಿವಾಟಿಗೆ ನೀವು ವಿತ್‌ಡ್ರಾ ಮಾಡಿಕೊಂಡ ಹಣಕ್ಕಿಂತ ಹೆಚ್ಚುವರಿಯಾಗಿ 20 ರೂ.ಗಳು ಕಟ್ ಆಗಲಿವೆ. ವಿತ್‌ಡ್ರಾ ಮಾಡಿಕೊಂಡಿರುವ ಹಣ ಎಷ್ಟೇ ಆದರೂ ಅದು ಲೆಕ್ಕಕ್ಕಿಲ್ಲ, ಬದಲಿಗೆ ಪ್ರತಿ ವಹಿವಾಟಿನ ಲೆಕ್ಕಾಚಾರ ಮಾಡಲಾಗುತ್ತದೆ.
ಇದರ ಜತೆಗೆ ಬ್ಯಾಂಕುಗಳು ಹಣಕಾಸಿನ ಪ್ರತಿ ವಹಿವಾಟಿಗೆ ವಿನಿಮಯ ಶುಲ್ಕವನ್ನು ರೂ.15 ರಿಂದ ರೂ.17 ಕ್ಕೆ ಏರಿಸಿದೆ. ಎಲ್ಲಾ ಕೇಂದ್ರಗಳಲ್ಲಿ ಹಣಕಾಸುಯೇತರ ವಹಿವಾಟುಗಳಿಗೆ ರೂ.5 ರಿಂದ ರೂ.6 ಕ್ಕೆ ಹೆಚ್ಚಿಸಲಾಗಿದೆ. ಗ್ರಾಹಕರು ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ಮೀರಿದರೆ, ಜನವರಿ 1, 2022 ರಿಂದ ಜಾರಿಗೆ ಬರುವಂತೆ ಪ್ರತಿ ವಹಿವಾಟಿಗೆ ರೂ 20 ರ ಬದಲು ರೂ 21 ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.