ನವದೆಹಲಿ: ಎರಡರಿಂದ 17 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೋವಿಡ್ -19 ಲಸಿಕೆ ಕೋವೊವ್ಯಾಕ್ಸ್‌ನ 2/3ನೇ ಹಂತದ ಪ್ರಯೋಗ ನಡೆಸಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಗೆ ಅನುಮತಿ ನೀಡಬಾರದು ಎಂದು ದೇಶದ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿ ಬುಧವಾರ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ದೇಶದ 10 ಕಡೆಗಳಲ್ಲಿ 12-17 ಮತ್ತು 2-11 ವಯೋಮಾನದ ತಲಾ 460 ಮಕ್ಕಳಿಗೆ ಕೋವೊವ್ಯಾಕ್ಸ್ ಲಸಿಕೆ ಪ್ರಯೋಗ ನಡೆಸಲು ಅನುಮತಿ ಕೋರಿ ಎಸ್‌ಐಐ ಸೋಮವಾರ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ಕ್ಕೆ ಅರ್ಜಿ ಸಲ್ಲಿಸಿದೆ.
'ಅರ್ಜಿಯ ಬಗ್ಗೆ ಚರ್ಚಿಸಿದ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಯ ಕೋವಿಡ್ -19 ಕುರಿತ ವಿಷಯ ತಜ್ಞರ ಸಮಿತಿ (ಎಸ್‌ಇಸಿ), ಯಾವುದೇ ದೇಶದಲ್ಲಿ ಕೋವೊವ್ಯಾಕ್ಸ್ ಲಸಿಕೆಗೆ ಅನುಮೋದನೆ ನೀಡಲಾಗಿಲ್ಲ' ಎಂದು ಅಭಿಪ್ರಾಯಪಟ್ಟಿರುವುದಾಗಿ ಮೂಲವೊಂದು ತಿಳಿಸಿದೆ.
'ಮಕ್ಕಳ ಮೇಲೆ ಲಸಿಕೆ ಪ್ರಯೋಗವನ್ನು ಪರಿಗಣಿಸಲು, ಪುಣೆ ಮೂಲದ ಕಂಪನಿಯು ವಯಸ್ಕರಲ್ಲಿ ನಡೆಯುತ್ತಿರುವ ಕೋವೊವ್ಯಾಕ್ಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿ ಕುರಿತ ದತ್ತಾಂಶ ಸಲ್ಲಿಸಬೇಕು ಎಂದು ಶಿಫಾರಸು ಮಾಡಿರುವುದಾಗಿ' ಮೂಲಗಳು ತಿಳಿಸಿವೆ.
ಪರಿಣಿತರ ಸಮಿತಿಯ ಶಿಫಾರಸುಗಳನ್ನು ಡಿಸಿಜಿಐ ಅನುಮೋದಿಸಿರುವುದಾಗಿ ತಿಳಿದುಬಂದಿದೆ.
ಆಗಸ್ಟ್ 2020 ರಲ್ಲಿ, ಅಮೆರಿಕ ಮೂಲದ ಲಸಿಕೆ ತಯಾರಕ ಕಂಪನಿ ನೊವಾವಾಕ್ಸ್ ಐಎನ್‌ಸಿಯು, ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳು ಮತ್ತು ಭಾರತದಲ್ಲಿ ತನ್ನ ಕೋವಿಡ್ -19 ಲಸಿಕೆ ಎನ್‌ವಿಎಕ್ಸ್-ಕೋವಿ 2373 ರ ಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕಾಗಿ ಎಸ್‌ಐಐನೊಂದಿಗೆ ಪರವಾನಗಿ ಒಪ್ಪಂದವನ್ನು ಘೋಷಿಸಿತ್ತು.
ಭಾರತದಲ್ಲಿ ಮಾರ್ಚ್ ತಿಂಗಳಿಂದ ಕೋವೊವ್ಯಾಕ್ಸ್‌ನ ಕ್ಲಿನಿಕಲ್ ಪ್ರಯೋಗಗಳು ಪ್ರಾರಂಭವಾಗಿವೆ.
.