ಲಂಡನ್: ಫೈಜರ್, ಆಸ್ಟ್ರಾಜೆನಿಕಾ ಲಸಿಕೆಯ ಕೋವಿಡ್-19 ವಿರುದ್ಧದ ಪ್ರತಿಕಾಯಗಳ ಮಟ್ಟ 2-3 ತಿಂಗಳ ನಂತರ ಇಳಿಕೆ ಸಾಧ್ಯತೆಯನ್ನು ಹೊಂದಿರುವುದು ಲಂಡನ್ ನ ವಿವಿಯ ಸಂಶೋಧನೆಯಿಂದ ಬಹಿರಂಗಗೊಂಡಿದೆ.
ಪೂರ್ಣಪ್ರಮಾಣದ ಲಸಿಕೆಯ ನಂತರದ 6 ವಾರಗಳಲ್ಲಿ ಪ್ರತಿಕಾಯಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ. ಆಸ್ಟ್ರಾಜೆನಿಕಾ, ಫೈಜರ್ ಲಸಿಕೆಗಳಲ್ಲಿ 10 ವಾರಗಳ ನಂತರ ಶೇ.50 ರಷ್ಟು ಪ್ರತಿಕಾಯಗಳು ಇಳಿಕೆಯಾಗುತ್ತವೆ ಎಂದು ಲ್ಯಾಸೆಂಟ್ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯ ಮೂಲಕ ತಿಳಿದುಬಂದಿದೆ.
ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ನಲ್ಲಿ ಈ ಕುರಿತ ಸಂಶೋಧನೆ ನಡೆದಿದ್ದು, ಈ ಪ್ರಮಾಣದಲ್ಲಿ ಪ್ರತಿಕಾಯಗಳು ಇಳಿಕೆಯಾದಲ್ಲಿ ಹೊಸ ವೈರಾಣು ತಳಿಗಳ ವಿರುದ್ಧ ಲಸಿಕೆಯಿಂದ ಸಿಗುವ ರಕ್ಷಣೆಯೂ ಕಾಡಿಮೆಯಾಗಲಿದೆ ಎಂಬ ಆತಂಕವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ. ಆದರೆ ಈ ಪ್ರತಿಕಾಯಗಳ ಕುಸಿತದಿಂದಾಗಿ ಉಂಟಾಗುವ ವೈದ್ಯಕೀಯ ಪರಿಣಾಮಗಳು ಎಷ್ಟು ಬೇಗ ಉಂಟಾಗುತ್ತವೆ ಎಂಬ ಅಂದಾಜು ಇನ್ನೂ ಲಭ್ಯವಾಗಿಲ್ಲ ಎನ್ನುತ್ತಾರೆ ಸಂಶೋಧಕರು.
ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ನೀಡಲಾಗುತ್ತಿರುವ ಆಸ್ಟ್ರಾಜೆನಿಕಾ ಲಸಿಕೆ ಮತ್ತು ಫೈಜರ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದ ನಂತರ ವ್ಯಕ್ತಿಗಳಲ್ಲಿ ಅತಿ ಹೆಚ್ಚಿನ ಪ್ರತಿಕಾಯಗಳಿರುತ್ತವೆ. ಇದೇ ಕಾರಣದಿಂದ ಕೋವಿಡ್-19 ವೈರಾಣು ತೀವ್ರವಾಗಿ ಬಾಧಿಸುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿದೆ ಎಂದು ಯುಸಿಎಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಇನ್ಫಾರ್ಮಾಟಿಕ್ಸ್ ನ ಮಧುಮಿತ ಶ್ರೋತ್ರಿ ಹೇಳಿದ್ದಾರೆ.
18 ವಯಸ್ಸಿನ ಮೇಲ್ಪಟ್ಟ 600 ಮಂದಿಯ ಡೇಟಾ ಸಂಗ್ರಹಿಸಿ ಈ ಅಧ್ಯಯನ ನಡೆಸಲಾಗಿದ್ದು, ಬೂಸ್ಟರ್ ಡೋಸ್ ಗಳಿಗೆ ಯಾರಿಗೆ ಆದ್ಯತೆ ನೀಡಬೇಕೆಂಬ ಪ್ರಶ್ನೆ ಎದುರಾದಲ್ಲಿ, ಲಸಿಕೆ ಅಭಿಯಾನದ ಆರಂಭಿಕ ದಿನಗಳಲ್ಲೇ ಪಡೆದಿದ್ದವರಲ್ಲಿ, (ಆಸ್ಟ್ರಾಜೆನಿಕಾ ಲಸಿಕೆ) ಈಗ ಪ್ರತಿಕಾಯಗಳ ಮಟ್ಟ ಕಡಿಮೆ ಇರಲಿದೆ. ಆದ್ದರಿಂದ ಬೂಸ್ಟರ್ ಡೋಸ್ ಗಳಿಗೆ ಅವರನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಯುಸಿಎಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಇನ್ಫಾರ್ಮಾಟಿಕ್ಸ್ ನ ಪ್ರೊಫೆಸರ್ ರಾಬ್ ಆಲ್ಡ್ರಿಡ್ಜ್ ಹೇಳಿದ್ದಾರೆ.
ವೈದ್ಯಕೀಯವಾಗಿ ದುರ್ಬಲರಾಗಿರುವ, 70 ವರ್ಷಗಳ ಮೇಲ್ಪಟ್ಟವರನ್ನು ಬೂಸ್ಟರ್ ಡೋಸ್ ಗಳಿಗೆ ಆದ್ಯತೆಯಾಗಿ ಪರಿಗಣಿಸಬೇಕೆಂದು ಸಂಶೋಧಕರು ಹೇಳಿದ್ದಾರೆ. ಫೈಜರ್ ಗೆ ಹೋಲಿಕೆ ಮಾಡಿದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಕಡಿಮೆ ಪ್ರತಿಕಾಯದ ಮಟ್ಟವನ್ನು ಹೊಂದಿರುವುದನ್ನೂ ಸಂಶೋಧಕರು ಗಮನಿಸಿದ್ದಾರೆ.