ನವದೆಹಲಿ: ಉಸಿರಾಟ ತೊಂದರೆ, ಆಮ್ಲಜನಕ ಕೊರತೆಯಿಂದಾಗಿ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಶೇಕಡ 30ರಷ್ಟು ಹೆಚ್ಚು ಕೊರೋನಾ ರೋಗಿಗಳು ಮೃತಪಟ್ಟಿದ್ದಾರೆ.
ಭಾರತದ 41 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನೋಂದಣಿ ಆಧಾರಿತ ಐಸಿಎಂಆರ್ ಅಧ್ಯಯನದಲ್ಲಿ ಈ ಅಂಶ ಬಹಿರಂಗಗೊಂಡಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ಸಾವುಗಳಲ್ಲಿ ಎಲ್ಲಾ ವಯೋಮಾನದವರು ಸೇರಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಮೊದಲ ಅಲೆಯಲ್ಲಿ ಶೇಕಡ 10.2ರಷ್ಟು ಮೃತಪಟ್ಟಿದ್ದು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಹೊರತುಪಡಿಸಿ ಎರಡನೇ ಅಲೆಯಲ್ಲಿ ಶೇಕಡ 13.3ರಷ್ಟು ರೋಗಿಗಳು ಮೃತಪಟ್ಟಿದ್ದಾರೆ. ಈ ಅಂಕಿಅಂಶಗಳನ್ನು ಪರಿಪೂರ್ಣವಾಗಿ ಹೇಳುವುದಾದರೆ, ಮರಣದ ಪ್ರಮಾಣ ಶೇಕಡ 30ರಷ್ಟು ಜಾಸ್ತಿಯಾಗಿದೆ.
ಇದನ್ನು ನೋಡಿದರೆ ಮೊದಲ ಅಲೆಗಿಂತ ಎರಡನೇ ಅಲೆ ತುಂಬಾ ಮಾರಕವಾಗಿದೆ. ಇನ್ನು ಆಸ್ಪತ್ರೆಗೆ ದಾಖಲಾದ 20-39 ವರ್ಷ ವಯಸ್ಸಿನ ರೋಗಿಗಳಲ್ಲಿ ಶೇಕಡ 6.5ರಷ್ಟು ಎರಡನೇ ಅಲೆಯಲ್ಲಿ ಸಾವನ್ನಪ್ಪಿದ್ದಾರೆ. ಮೊದಲ ಅಲೆಯಲ್ಲಿ ಶೇಕಡ 3.5ರಷ್ಟಿತ್ತು. ಇನ್ನು 40-60 ವರ್ಷದೊಳಗಿನ ಮರಣ ಪ್ರಮಾಣವು ಶೇಕಡ 9.2ರಷ್ಟಿಂದ 12.1ಕ್ಕೆ ಏರಿಕೆಯಾಗಿದೆ. 60ಕ್ಕಿಂತ ಮೇಲ್ಪಟ್ಟವರ ಸಾವಿನ ಪ್ರಮಾಣ ಶೇಕಡ 17 ರಿಂದ ಶೇಕಡ 22.2ಕ್ಕೆ ಏರಿಕೆಯಾಗಿದೆ.