ನವದೆಹಲಿ: ಕೋವಿಡ್-19 ಸಾಂಕ್ರಾಮಿಕವು ಶಿಕ್ಷಣ ಸಂಸ್ಥೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಖಾಸಗಿ ಶಾಲೆಗಳ ಆದಾಯದಲ್ಲಿ ಶೇಕಡ 20ರಿಂದ 50ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಬಹುತೇಕ ಶಿಕ್ಷಕರು ವೇತನ ಕಡಿತ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಭಾರತದ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಕಾರ್ಯನಿರ್ವಹಿಸುವ ಸರ್ಕಾರೇತರ ಸಂಸ್ಥೆ ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ (ಸಿಎಸ್‌ಎಫ್) ಈ ಸಂಬಂಧ ಅಧ್ಯಯನವೊಂದನ್ನು ನಡೆಸಿದೆ. ಇದರಲ್ಲಿ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 1,100 ಮಂದಿ(ಪೋಷಕರು,ಶಾಲಾ ಸಿಬ್ಬಂದಿ, ಶಿಕ್ಷಕರು) ಭಾಗಿಯಾಗಿದ್ದರು.
ಈ ವರ್ಷ ಹೊಸದಾಗಿ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಶೇಕಡ 55ರಷ್ಟು ಶಾಲೆಗಳು ಹೇಳಿದರೆ, ಮುಕ್ಕಾಲು ಭಾಗದಷ್ಟು ಶಾಲೆಗಳು ಆರ್‌ಟಿಇ(ಶಿಕ್ಷಣದ ಹಕ್ಕು) ಅಡಿ ಸರ್ಕಾರದಿಂದ ಬರಬೇಕಾದ ಶುಲ್ಕ ಮರುಪಾವತಿಯಾಗುವುದು ವಿಳಂಬವಾಗುತ್ತಿದೆ ಎಂದು ತಿಳಿಸಿವೆ.
ಶೇಕಡ 20ರಿಂದ 50ರಷ್ಟು ಆದಾಯ ಕಡಿಮೆಯಾಗಿದೆ. ಇದರಿಂದಾಗಿ ಶಾಲೆಗಳು ಸಂಕಷ್ಟ ಎದುರಿಸುತ್ತಿವೆ. ಕೋವಿಡ್‌ನಿಂದ ಪೋಷಕರಿಗೆ ನಿಯಮಿತವಾಗಿ ಶುಲ್ಕವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ತೊಂದರೆ ನಗರದ ಶಾಲೆಗಳಲ್ಲಿಯೇ ಹೆಚ್ಚು. ಈ ಶೈಕ್ಷಣಿಕ ವರ್ಷ ಹೊಸ ಪ್ರವೇಶಾತಿಯಲ್ಲಿ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದಾಗಿ ಶೇಕಡ 55ರಷ್ಟು ಶಾಲೆಗಳು ಹೇಳಿವೆ ಎಂದು ಅಧ್ಯಯನ ತಿಳಿಸಿದೆ.
ಕೋವಿಡ್ ಸಮಯದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯಲು ಶೇಕಡ 77ರಷ್ಟು ಶಾಲೆಗಳು ಹಿಂಜರಿದರೆ, ಶೇಕಡ 3ರಷ್ಟು ಶಾಲೆಗಳು ಸಾಲಗಳನ್ನು ಪಡೆದಿವೆ. ಶೇಕಡ 5ರಷ್ಟು ಶಾಲೆಗಳು ಸಾಲಕ್ಕಾಗಿ ಕಾಯುತ್ತಿವೆ.
ಲಾಕ್‌ಡೌನ್ ಅವಧಿಯಲ್ಲಿ ಶೇಕಡ 55ರಷ್ಟು ಖಾಸಗಿ ಶಾಲೆಯ ಶಿಕ್ಷಕರು ವೇತನ ಕಡಿತವನ್ನು ಎದುರಿಸಿದ್ದಾರೆ. ಶಾಲೆಗಳು ಶಿಕ್ಷಕರಿಗೆ ಅರ್ಧದಷ್ಟು ವೇತನವನ್ನು ನೀಡುತ್ತಿವೆ. ಕಡಿಮೆ ಶುಲ್ಕ ಪಡೆಯುವ ಶಾಲೆಗಳಲ್ಲಿ ಶೇಕಡ 65 ರಷ್ಟು ಶಿಕ್ಷಕರು ವೇತನ ಕಡಿತದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಹೆಚ್ಚು ಶುಲ್ಕ ಪಡೆಯುವ ಶಾಲೆಗಳಲ್ಲಿ ಶೇಕಡ 37ರಷ್ಟು ಶಿಕ್ಷಕರ ವೇತನವನ್ನು ತಡೆ ಹಿಡಿಯಲಾಗಿದೆ. ಶೇಕಡ 54 ರಷ್ಟು ಶಿಕ್ಷಕರಿಗೆ ಪರ್ಯಾಯ ಆದಾಯದ ಮೂಲಗಳಿಲ್ಲ. ಶೇಕಡ 30ರಷ್ಟು ಶಿಕ್ಷಕರು ಟ್ಯೂಶನ್‌ಗಳ ಮೂಲಕ ಸ್ವಲ್ಪ ಮಟ್ಟಿಗೆ ಸಂಪಾದಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಶೇಕಡ 70ರಷ್ಟು ಪೋಷಕರು ಶಾಲೆಯ ಶುಲ್ಕದಲ್ಲಿ ಬದಲಾವಣೆಯಾಗಿಲ್ಲ ಎಂದು ಹೇಳಿದರೆ, ಶೇಕಡ 50ರಷ್ಟು ಪೋಷಕರು ಮಾತ್ರವೇ ಸರಿಯಾಗಿ ಶಾಲಾ ಶುಲ್ಕವನ್ನು ಭರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.