ನವದೆಹಲಿ: ಭಾರತದ ಸುಮಾರು ಶೇ.61ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಈಗಲೂ ಕಂಪ್ಯೂಟರ್ ಗಳಿಲ್ಲ ಮತ್ತು ಶೇ.78ರಷ್ಟು ಶಾಲೆಗಳು ಅಂತರ್ಜಾಲ ಸೌಲಭ್ಯದಿಂದ ವಂಚಿತವಾಗಿವೆ ಎಂದು ಕೇಂದ್ರ ಸರಕಾರವು ಬಿಡುಗಡೆಗೊಳಿಸಿರುವ 2019-20ನೇ ಸಾಲಿನ ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆಯ (ಯುಡಿಐಎಸ್‌ಇ+) ದತ್ತಾಂಶಗಳು ತೋರಿಸಿವೆ. ಈ ದತ್ತಾಂಶಗಳು ಸರಕಾರಿ ಮತ್ತು ಖಾಸಗಿ ಶಾಲೆಗಳೆರಡನ್ನೂ ಒಳಗೊಂಡಿವೆ.
ಶೇ.84ಕ್ಕೂ ಅಧಿಕ ಶಾಲೆಗಳಲ್ಲಿ ಗ್ರಂಥಾಲಯಗಳು ಮತ್ತು ವಾಚನಾ ಕೊಠಡಿಗಳು ಇವೆಯಾದರೂ, ಕೇವಲ ಶೇ.69.4ರಷ್ಟು ಶಾಲೆಗಳ ಗ್ರಂಥಾಲಯಗಳಲ್ಲಿ ಪುಸ್ತಕಗಳಿವೆ.
ಶಿಕ್ಷಣ ಸಚಿವಾಲಯವು 2012-13ರ ಶೈಕ್ಷಣಿಕ ವರ್ಷದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದ ಯುಡಿಐಎಸ್‌ಇ ಶಾಲಾ ಶಿಕ್ಷಣ ಕುರಿತು ಬೃಹತ್ ನಿರ್ವಹಣೆ ಮಾಹಿತಿ ವ್ಯವಸ್ಥೆಗಳಲ್ಲೊಂದಾಗಿದೆ. ಅದು 15 ಲ.ಕ್ಕೂ ಅಧಿಕ ಶಾಲೆಗಳು, 85 ಲ.ಕ್ಕೂ ಅಧಿಕ ಶಿಕ್ಷಕರು ಮತ್ತು 25 ಕೋ. ವಿದ್ಯಾರ್ಥಿಗಳನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿದೆ. ಯುಡಿಐಎಸ್‌ಇ+ ಇದು ಯುಡಿಐಎಸ್‌ಇಯ ಪರಿಷ್ಕೃತ ಆವೃತ್ತಿಯಾಗಿದೆ.
ಈ ತಿಂಗಳ ಪೂರ್ವಾರ್ಧದಲ್ಲಿ ಬಿಡುಗಡೆಗೊಂಡ ಪರ್ಫಾರ್ಮನ್ಸ್ ಗ್ರೇಡಿಂಗ್ ಇಂಡೆಕ್ಸ್ ನಂತಹ ಶಾಲಾ ಶಿಕ್ಷಣ ಮಟ್ಟಗಳನ್ನು ಅಳೆಯಲು ವಿವಿಧ ಇತರ ಮಾನದಂಡಗಳ ಲೆಕ್ಕಾಚಾರಕ್ಕೂ ಯುಡಿಐಎಸ್‌ಇ ದತ್ತಾಂಶಗಳನ್ನು ಬಳಸಲಾಗುತ್ತದೆ.
ನೂತನ ವರದಿಯಂತೆ 2019-20ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು ಉನ್ನತ ಮಾಧ್ಯಮಿಕ ಹಂತದವರೆಗಿನ ತರಗತಿಗಳಿಗೆ ಒಟ್ಟು 26.45 ಕೋ.ವಿದ್ಯಾರ್ಥಿಗಳು ದಾಖಲಾಗಿದ್ದು, 2018-19ನೇ ಸಾಲಿಗೆ ಹೋಲಿಸಿದರೆ 42.3 ಲಕ್ಷದಷ್ಟು ಏರಿಕೆಯಾಗಿದೆ. ಎಲ್ಲ ಹಂತಗಳಲ್ಲಿಯೂ ಬಾಲಕಿಯರ ಪ್ರವೇಶ ಪ್ರಮಾಣ ಹೆಚ್ಚಿದ್ದು, ಪೂರ್ವ ಪ್ರಾಥಮಿಕ ಹಂತದಲ್ಲಿ ಬಾಲಕಿಯರ ಗರಿಷ್ಠ ಪ್ರವೇಶ ಕಂಡು ಬಂದಿದೆ. 2018-19ನೇ ಸಾಲಿಗೆ ಹೋಲಿಸಿದರೆ 2019-20ರಲ್ಲಿ ಶೇ.14.2ರಷ್ಟು ಹೆಚ್ಚಿನ ಬಾಲಕಿಯರು ಪ್ರವೇಶ ಪಡೆದಿದ್ದಾರೆ.
2018-19ನೇ ಸಾಲಿಗೆ ಹೋಲಿಸಿದರೆ 2019-20ನೇ ಸಾಲಿನಲ್ಲಿ ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಒಟ್ಟು ಪ್ರವೇಶ ಅನುಪಾತ (ಜಿಇಆರ್)ದಲ್ಲಿ ಸುಧಾರಣೆಯಾಗಿದೆ. 2012-13 ಮತ್ತು 2019-20ರ ನಡುವೆ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಹಂತಗಳಲ್ಲಿ ಬಾಲಕಿಯರಿಗಾಗಿ ಜಿಇಆರ್ ಬಾಲಕರಿಗಿಂತ ಹೆಚ್ಚಿದೆ. 2012-13ರಲ್ಲಿ ಸೆಕೆಂಡರಿ ಹಂತದಲ್ಲಿ ಶೇ.68.2ರಷ್ಟಿದ್ದ ಬಾಲಕಿಯರ ಜಿಇಆರ್ 2019-20ನೇ ಸಾಲಿಗೆ ಶೇ.77.8ರಷ್ಟಿತ್ತು ಎಂದು ವರದಿಯು ತಿಳಿಸಿದೆ.
2018-19ನೇ ಸಾಲಿಗೆ ಹೋಲಿಸಿದರೆ 2019-20ನೇ ಸಾಲಿನಲ್ಲಿ ಶಾಲಾ ಶಿಕ್ಷಕರ ಸಂಖ್ಯೆ 2.57 ಲಕ್ಷ ಏರಿಕೆಯೊಂದಿಗೆ 96.87 ಲಕ್ಷದಷ್ಟಿತ್ತು.
ಮೂಲಸೌಕರ್ಯ ಸೌಲಭ್ಯಗಳ ಕುರಿತಂತೆ ವರದಿಯು ಶೇ.90ರಷ್ಟು ಶಾಲೆಗಳಲ್ಲಿ ಕೈಗಳನ್ನು ತೊಳೆದುಕೊಳ್ಳುವ ವ್ಯವಸ್ಥೆಯಿದ್ದು, 2012-13ರಲ್ಲಿಯ ಶೇ.36.3ಕ್ಕೆ ಹೋಲಿಸಿದರೆ ಗಣನೀಯ ಪ್ರಗತಿಯಾಗಿದೆ. 2018-19ಕ್ಕೆ ಹೋಲಿಸಿದರೆ 2019-20ರಲ್ಲಿ ಶೇ.7ರಷ್ಟು ಹೆಚ್ಚಿನ, ಅಂದರೆ ಶೇ.83.4ರಷ್ಟು ಶಾಲೆಗಳು ವಿದ್ಯುತ್ ಸಂಪರ್ಕ ಹೊಂದಿದ್ದವು ಎಂದು ತಿಳಿಸಿದೆ.