ಟೊಕಿಯೋ: ಒಲಿಂಪಿಕ್ಸ್ಗೆ ಸಂಬಂಧಿತ ಟಿವಿ ಜಾಹೀರಾತುಗಳನ್ನು ನೀಡುತ್ತಿಲ್ಲ ಎಂದು ಪ್ರಾಯೋಜಕ ಕಂಪನಿ ಟೊಯೋಟಾ ಪ್ರಕಟಿಸಿದೆ. ಅದರ ಅಧ್ಯಕ್ಷರು ಕೂಡಾ ಜುಲೈ 23 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ, ಇದರಿಂದಾಗಿ ಟೊಕಿಯೋ 2020 ಒಲಿಂಪಿಕ್ಸ್ ಜಾಹೀರಾತು ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಟೋಕಿಯೊದಲ್ಲಿ ಶುಕ್ರವಾರ ತುರ್ತು ಪರಿಸ್ಥಿತಿಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ.ಇದಕ್ಕೂ ಮುನ್ನ ಜಪಾನ್‌ನ ಅತಿದೊಡ್ಡ ವಾಹನ ತಯಾರಕ ಕಂಪನಿಯ ಘೋಷಣೆಯು ಒಲಿಂಪಿಕ್ ಕ್ರೀಡಾಕೂಟಕ್ಕೆ ದೊಡ್ಡ ಹೂಡೆತ ಬಿದ್ದಂತಾಗಿದೆ.
ಆಥ್ಲೀಟ್ ಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತವೆ ಮತ್ತು ವಾಹನಗಳು ಮತ್ತಿತರ ಪೂರೈಕೆ ಮೂಲಕ ಕ್ರೀಡಾಕೂಟಕ್ಕೆ ಕೊಡುಗೆ ನೀಡುವುದಾಗಿ ಟೊಯೊಟಾ ಮುಖ್ಯ ಕಮ್ಯೂನಿಕೇಷನ್ ಅಧಿಕಾರಿ ಜುನ್ ನಾಗಟಾ ಸುದ್ದಿಗೋಷ್ಠಿಯಲ್ಲಿ ಹೇಳಿದರು ಎಂದು ಕ್ಯೂಡೊ ನ್ಯೂಸ್ ವರದಿ ಮಾಡಿದೆ.
ಕೋವಿಡ್-19 ಭೀತಿಯ ನಡುವೆಯೂ ಟೊಕಿಯೋ 2020 ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತಿದೆ. ಸೋಮವಾರ ಅಮೆರಿಕಾದ ಮಹಿಳಾ ಜಿಮ್ನಾಸ್ಟಿಕ್ ಆಟಗಾರ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಆದಾಗ್ಯೂ, ಈ ಆಥ್ಲೀಟ್ ಹೆಸರನ್ನು ಬಹಿರಂಗಪಡಿಸಿಲ್ಲ. ದಕ್ಷಿಣ ಆಫ್ರಿಕಾದ 23 ವರ್ಷದೊಳಗಿನ ಪುರುಷರ ಪುಟ್ಬಾಲ್ ತಂಡದ ಮೂವರು ಸದಸ್ಯರಿಗೆ ಕೋವಿಡ್-19 ಸೋಂಕು ತಗುಲಿದ್ದು, ಪ್ರಸ್ತುತ ಐಸೋಲೇಷನ್ ನಲ್ಲಿದ್ದಾರೆ.