ನವದೆಹಲಿ: ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಸುವ 'ಚಂದ್ರಯಾನ-3' ಗಗನಯಾನವು 2022ರ ಮೂರನೇ ತ್ರೈಮಾಸಿಕದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಜಿತೇಂದ್ರ ಸಿಂಗ್ ಅವರು, ಕೋವಿಡ್-19 ಕಾರಣಕ್ಕೆ ಯೋಜನೆಯ ಪ್ರಗತಿ ಕುಂಠಿತಗೊಂಡಿದೆ. ಹೀಗಾಗಿ, ಚಂದ್ರಯಾನ-3 ಯೋಜನೆಯ ಉಡಾವಣೆಯ ದಿನಾಂಕವನ್ನು ಮರುನಿಗದಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಂದ್ರಯಾನ-3 ಯೋಜನೆಯು ಹಲವು ಪ್ರಕ್ರಿಯೆಗಳನ್ನು ಒಳಗೊಂಡಿದೆ. ಹಲವಾರು ರೀತಿಯ ಪರೀಕ್ಷೆಗಳನ್ನು ಕೈಗೊಳ್ಳಬೇಕಾಗಿದೆ. ಲಾಕ್‌ಡೌನ್ ಅವಧಿಯಲ್ಲೂ ಮನೆಯಿಂದಲೇ ಕೆಲಸ ಮಾಡಿದ ವಿಜ್ಞಾನಿಗಳು ಹಲವಾರು ಕಾರ್ಯಗಳನ್ನು ಪೂರೈಸಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಯೋಜನೆಯ ಕಾರ್ಯವು ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸುವ ಉದ್ದೇಶ ಹೊಂದಿದ್ದ 'ಚಂದ್ರಯಾನ-2' ಅನ್ನು 2019ರ ಜುಲೈ 22ರಂದು ಉಡಾವಣೆ ಮಾಡಲಾಗಿತ್ತು. ಆದರೆ, ಲ್ಯಾಂಡರ್ ಇಳಿಸುವಲ್ಲಿ ಕೊನೆ ಗಳಿಗೆಯಲ್ಲಿ ಇಸ್ರೊ ವಿಫಲವಾಗಿತ್ತು.