ಕೊಲಂಬೊ: ಇಲ್ಲಿನ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ ಟಿ-20 ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್ ಗಳಿಂದ ಸೋಲಿಸಿದ ಸೋಲಿಸಿದ ಶ್ರೀಲಂಕಾ 2-1 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಎರಡನೇ ಓವರ್ ನಲ್ಲೇ ದೊಡ್ಡ ಆಘಾತ ಎದುರಾಯಿತು. 12 ರನ್ ಗಳಿಸುವಷ್ಟರಲ್ಲಿ ಚಾಮೀರಾ ದೊಡ್ಡ ವಿಕೆಟ್ ಪಡೆದುಕೊಂಡರು. ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಶೂನ್ಯಕ್ಕೆ ಔಟಾದರು. ನಂತರ ಬಂದ ದೇವದತ್ತ ಪಡಿಕ್ಕಲ್ ಕೂಡಾ ಕೇವಲ 9 ರನ್ ಗಳಿಸುವಷ್ಟರಲ್ಲಿ ರನ್ ಔಟ್ ಆಗಿ ಫೆವಿಲಿಯನ್ ನತ್ತ ಹೆಜ್ಜೆ ಹಾಕಿದರು.
ತದ ನಂತರ ಋತುರಾಜ್ ಗಾಯಕ್ವಾಡ್ 14 ರನ್ ಗಳಿಸಿ ಹಸರಂಗ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಗೆ ಬಲಿಯಾದರು. ಸಂಜು ಸ್ಯಾಮ್ಸನ್ ಕೂಡಾ ಹಸರಂಗ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂಗೆ ಬಲಿಯಾದರು. ನಂತರ ನಿತೀಶ್ ರಾಣಾ ಕೂಡಾ ಕೇವಲ 6 ರನ್ ಗಳಿಸಿ ಔಟಾದರು. ಬಳಿಕ ಭುವನೇಶ್ವರ್ ಕುಮಾರ್ 16, ರಾಹುಲ್ ಚಹಾರ್, 5, ಚೇತನ್ ಸಕಾರಿಯಾ 5 ರನ್ ಗಳಿಸಿದರು. ಇದರಿಂದಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಪರ ಅವಿಷ್ಕಾ ಫರ್ನಾಂಡೋ 12, ಮಿನೊದ್ ಭಾನುಕಾ 18, ಸದೀರಾ ಸಮರವಿಕ್ರಮ್ 6, ಧನಂಜಯ ಡಿಸಿಲ್ವಾ 23, ವಾನಿಂದು ಹಸರಂಗ 14 ರನ್ ಕಲೆಹಾಕುವುದರೊಂದಿಗೆ ಇನ್ನೂ 33 ಎಸೆತ ಬಾಕಿ ಇರುವಂತೆಯೇ ಏಳು ವಿಕೆಟ್ ಗಳಿಂದ ಶ್ರೀಲಂಕಾ ಗೆಲುವು ಸಾಧಿಸಿ, 2-1 ಅಂತರದೊಂದಿಗೆ ಸರಣಿಯನ್ನು ವಶಕ್ಕೆ ಪಡೆಯಿತು.