ನವದೆಹಲಿ: ''ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹುದ್ದೆಗಳಿಗೆ ನೇಮಕ ಮಾಡುವ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಕನ್ನಡದಲ್ಲಿ ಪರೀಕ್ಷೆ ಬರೆಯಲು ಆಸ್ಪದ ನೀಡಿಲ್ಲ,'' ಎಂಬ ವರದಿಗಳು ಬಂದಿರುವ ಬಗ್ಗೆ ವಿತ್ತ ಸಚಿವಾಲಯ ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ ಮಾಧ್ಯಮದ ಕೆಲವು ವಿಭಾಗಗಳಲ್ಲಿ, ಭಾರತೀಯ ಸಂವಿಧಾನದಲ್ಲಿ 22 ಭಾಷೆಗಳಿಗೆ ಮಾನ್ಯತೆ ನೀಡಿದ್ದರೂ ಸಹ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್), ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ಗುಮಾಸ್ತರ ವೃಂದ(ಕ್ಲರಿಕಲ್ ಕೇಡರ್) ನೇಮಕಕ್ಕೆ ಕೇವಲ ಎರಡು ಭಾಷೆಗಳಲ್ಲಿ ಅಂದರೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತಿದೆ ಎಂಬ ಜಾಹಿರಾತಿನ ಕುರಿತು ವರದಿಗಳು ಪ್ರಕಟವಾಗಿರುವುದು ಗಮನಕ್ಕೆ ಬಂದಿದೆ. ಈ ವರದಿಗಳಲ್ಲಿ ಕೇಂದ್ರ ಹಣಕಾಸು ಸಚಿವರು 2019ರಲ್ಲಿ ಸ್ಥಳೀಯ ಭಾಷೆಗಳಲ್ಲೇ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸುವ ಕುರಿತು ಭರವಸೆ ನೀಡಿದ್ದ ಹೇಳಿಕೆಯನ್ನೂ ಸಹ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆ ಹಣಕಾಸು ಸಚಿವಾಲಯ ಈ ಮೂಲಕ ಸ್ಪಷ್ಟಪಡಿಸುವುದೆಂದರೆ ಹಣಕಾಸು ಸಚಿವರ ಹೇಳಿಕೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್‌ಆರ್‌ಬಿ)ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಈ ಮೂಲಕ ತಿಳಿಸಲಾಗಿದೆ. ಸ್ಥಳೀಯ ಯುವಕರಿಗೆ ಸಮಾನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಸರ್ಕಾರ 2019ರಲ್ಲಿ ಆರ್ ಆರ್ ಬಿಗಳ ಕಚೇರಿ ಸಹಾಯಕ ಮತ್ತು ಅಧಿಕಾರಿ ವೃಂದ-1 ಇವುಗಳ ನೇಮಕಾತಿಗೆ ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೆ, ಕೊಂಕಣಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿತ್ತು. ಅದರನ್ವಯ ಈ ನೇಮಕಾತಿಗಳಿಗೆ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಸಹ ನಡೆಸಲಾಗುತ್ತಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿಗಳ) ಗುಮಾಸ್ತರ ವೃಂದದ ನೇಮಕಾತಿಗೆ ಸ್ಥಳೀಯ/ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆಗಳನ್ನು ನಡೆಸಬೇಕೆಂಬ ಬೇಡಿಕೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿ 15 ದಿನಗಳೊಳಗೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಲಿದೆ. ಹಾಗಾಗಿ ಪ್ರಸ್ತುತ ಐಬಿಪಿಎಸ್ ಆರಂಭಿಸಿದ್ದ ಪರೀಕ್ಷಾ ಪ್ರಕ್ರಿಯೆಯನ್ನು ಸಮಿತಿ ಶಿಫಾರಸ್ಸು ನೀಡುವವರೆಗೆ ತಡೆಹಿಡಿಯಲಾಗುವುದು.