ನವದೆಹಲಿ: ಇಂದು ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನ. 1999ನೇ ಇಸವಿಯ ಜುಲೈ 26ರಂದು ಭಾರತೀಯ ಸೈನಿಕರು ಆಪರೇಶನ್ ವಿಜಯ್ ಮೂಲಕ ಕಾರ್ಗಿಲ್–ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ.
ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಪತಾಕೆಯನ್ನು ಹಾರಿಸಿ 22 ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಮೂರು ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್, ಲಡಾಖ್'ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಥುರ್ ಹಾಗೂ ಲಡಾಶ್ ಸಂಸದ ಜಮಿಯಾಂಗ್ ತ್ಸೆರಿಂಗ್ ನಮಗ್ಯಾಲ್, ಸೇನಾ ಮುಖ್ಯಸ್ಥ ಎಂಎಂ ನರವಾಣೆ, ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ, ನೌಕಾಪಡೆಯ ವೈಸ್ ಚೀಫ್ ವೈಸ್ ಅಡ್ಮಿರಲ್ ಜಿ ಅಶೋಕ್ ಕುಮಾರ್, ಸಿಐಎಸ್'ಸಿ ವೈಸ್ ಅಡ್ಮಿರಲ್ ಅತುಲ್ ಜೈನ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಇದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಸೇರಿದಂತೆ ಹಲವು ನಾಯಕರೂ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಹುತಾತ್ಮ ವೀರ ಯೋಧರನ್ನು ಸ್ಮರಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಅವರ ತ್ಯಾಗವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರ ಶೌರ್ಯ ನಮಗೆ ನೆನಪಿದೆ. ಇಂದು ಕಾರ್ಗಿಲ್ ವಿಜಯದ ದಿನ. ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಕಳೆದುಕೊಂಡ ಯೋಧರಿಗೆ ನಾವು ಗೌರವ ಸಲ್ಲಿಸುತ್ತಿದ್ದೇವೆ. ಅವರ ಧೈರ್ಯ ಪ್ರತೀನಿತ್ಯ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ, ಕಾರ್ಗಿಲ್ ವಿಜಯದ ದಿನ ಹಿನ್ನೆಲೆಯಲ್ಲಿ ಇಂದು ಎಲ್ಲಾ ವೀರ ಯೋಧರನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ. ನಿಮ್ಮ ಧೈರ್ಯ, ಶೌರ್ಯ ಮತ್ತು ತ್ಯಾಗದ ಕಾರಣದಿಂದಾಗಿ, ತ್ರಿವರ್ಣವನ್ನು ಮತ್ತೆ ಹೆಮ್ಮೆಯಿಂದ ಕಾರ್ಗಿಲ್‌ನ ಪ್ರವೇಶಿಸಲಾಗದ ಬೆಟ್ಟಗಳ ಮೇಲೆ ಹಾರಿಸಲಾಯಿತು. ಕೃತಜ್ಞರಾಗಿರುವ ರಾಷ್ಟ್ರವು ದೇಶದ ಸಮಗ್ರತೆಯನ್ನು ಹಾಗೇ ಇರಿಸಲು ನಿಮ್ಮ ಸಮರ್ಪಣೆಗೆ ನಮಸ್ಕರಿಸುತ್ತದೆ, ರಾಷ್ಟ್ರದ ಸಮಗ್ರತೆಗಾಗಿ ನಿಮ್ಮ ಸಮರ್ಪಣೆಗೆ ನಮಸ್ಕರಿಸುತ್ತೇನೆಂದು ತಿಳಿಸಿದ್ದಾರೆ.
1999ರ ಮೇ ತಿಂಗಳಿನಲ್ಲಿ ಆರಂಭವಾಗಿ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು.