ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಇದೇ 23 ರಂದು ಅಯೋಧ್ಯೆಯಲ್ಲಿ ಬ್ರಾಹ್ಮಣ್ಯರ ಸಮ್ಮೇಳನವನ್ನು ಆಯೋಜಿಸುತ್ತಿದೆ.
ಸುದ್ದಿಗಾರರಿಗೆ ಇಂದು ಈ ವಿಷಯ ತಿಳಿಸಿದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂಬ ಹೆಚ್ಚಿನ ವಿಶ್ವಾಸವಿದೆ ಎಂದರು.
ಬ್ರಾಹ್ಮಣ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಜುಲೈ 23 ರಂದು ಅಯೋಧ್ಯೆಯಿಂದ ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಮಿಶ್ರಾ ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು, ಬಿಎಸ್ ಪಿ ಆಡಳಿತದಲ್ಲಿ ಮಾತ್ರ ಅವರ ಹಿತಾಸಕ್ತಿ ಸುಭದ್ರ ಎಂಬ ಭರವಸೆ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ದೇಶ ಹಾಗೂ ಜನರಿಗೆ ಪ್ರಯೋಜನಕಾರಿಯಾದ ವಿಷಯಗಳ ಬಗ್ಗೆ ಧ್ವನಿ ಎತ್ತುವಂತೆ ಬಿಎಸ್ ಪಿ ಪಕ್ಷದ ಸಂಸದರಿಗೆ ನಿರ್ದೇಶನ ನೀಡಲಾಗಿದೆ. ದೇಶದ ಜನರು ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆಯನ್ನು ಬಯಸುವ ಅನೇಕ ವಿಷಯಗಳಿವೆ ಎಂದು ಮಾಯವತಿ ಹೇಳಿದರು.