ಬೆಂಗಳೂರು: 6ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನ ಆ.27ರಿಂದ 29ರವರೆಗೆ ಆನ್ಲೈನ್ ವೇದಿಕೆಯಲ್ಲಿ ನಡೆಯಲಿದ್ದು, ಭರಪೂರ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವು ಕಥಾ ಹಂದರವುಳ್ಳ ನಾಟಕಗಳು, ನೃತ್ಯರೂಪಕಗಳು, ಹಲವು ಬಗೆಯ ಸಂಗೀತ ಸುಧೆ ಕನ್ನಡಿಗರ ಮನೆಮನೆಗೆ ತಲುಪಲಿದೆ ಎಂದು ಮನರಂಜನಾ ಕಾರ್ಯಕ್ರಮಗಳ ಉಸ್ತುವಾರಿ, ಸಮ್ಮೇಳನದ ಸಹ ಸಂಚಾಲಕ ಹಾಗೂ 'ನಾವಿಕ'ದ ಪ್ರಧಾನ ಕಾರ್ಯದರ್ಶಿ ಮಂಜುನಾಥ ರಾವ್ ತಿಳಿಸಿದ್ದಾರೆ. ಕಾರ್ಯಕ್ರಮಗಳು 'ರಾಜಸಭಾ' ಶೀರ್ಷಿಕೆಯಡಿ ಏಕಕಾಲಕ್ಕೆ (ಸಂಜೆ 5ರಿಂದ ರಾತ್ರಿ 12ರವರೆಗೆ) ಐದು 'ವಾಹಿನಿ'ಗಳಲ್ಲಿ ಪ್ರಸಾರವಾಗಲಿವೆ ಎಂದು ನಾವಿಕ ಫೀನಿಕ್ಸ್ ಯುಎಸ್ಎ ಪ್ರಾಂತೀಯ ನಿರ್ದೇಶಕ ಅನಿಲ್ ಭಾರದ್ವಾಜ್ ತಿಳಿಸಿದ್ದಾರೆ.
ರಂಗ ನಾವಿಕ: ಅಮೆರಿಕ ಸೇರಿ ವಿವಿಧ ದೇಶಗಳಲ್ಲಿ ನೆಲೆಸಿರುವ ಹವ್ಯಾಸಿ ಕನ್ನಡ ನಾಟಕ ತಂಡದವರಿಗಾಗಿ ನಾಟಕ ಸ್ಪರ್ಧೆ ಏರ್ಪಡಿಸಿದ್ದು, 9 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ತೀರ್ಪಗಾರರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ರಂಗಕರ್ವಿು ಮಂಡ್ಯ ರಮೇಶ್ ಕರ್ತವ್ಯ ನಿಭಾಯಿಸಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಧಾರವಾಡದ ನಾಟಕ ತಂಡದಿಂದ ತಲಾ ಒಂದರಂತೆ ಒಟ್ಟಾರೆ 11 ನಾಟಕಗಳು ಅಲಮೇಲು ಐಯ್ಯಂಗಾರ್ ಸಾರಥ್ಯದಲ್ಲಿ ಪ್ರದರ್ಶನಗೊಳ್ಳಲಿವೆ.
ಸ್ವರ ನಾವಿಕ: ವಿಶ್ವದೆಲ್ಲೆಡೆ ಇರುವ ಕನ್ನಡ ಕೂಟಗಳಿಂದ 40ಕ್ಕೂ ಹೆಚ್ಚು ಕಲಾಸಕ್ತರು ಭಾವಗೀತೆ, ಜನಪದ ಗೀತೆ, ಶಾಸ್ತ್ರೀಯ ಸಂಗೀತ, ಚಿತ್ರಗೀತೆ, ಭರತನಾಟ್ಯ ಸೇರಿದಂತೆ ವಿವಿಧ ಕಲಾ ಪ್ರಕಾರ ಪ್ರದರ್ಶಿಸಲಿದ್ದಾರೆ. ಶೇಷಪ್ರಸಾದ್ ಚಿಕ್ಕತ್ತೂರು ನಿರ್ವಹಣೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿವಿಧ ದೇಶಗಳ ಕಲಾವಿದರು ಹಾಡುಗಳನ್ನು ರೆಕಾರ್ಡ್ ಮಾಡಿ ಕಳುಹಿಸುತ್ತಿದ್ದಾರೆ.
ಯೋಗ ನಾವಿಕ: ರಾಹುಲ್ ವೆಲ್ಲಾಳರಿಂದ 'ಸ್ವರಸಂಗಮ' ಸಂಗೀತ, ಮನೋಜ್ ವಸಿಷ್ಠ ಹಾಗೂ ಅರುಂಧತಿ ವಸಿಷ್ಠ ಅವರಿಂದ ಭಾವಗೀತೆಗಳ 'ಭಾವಲಹರಿ', ಭೂಮಿಕ ಎಲ್ ಮಧುಸೂದನರಿಂದ ಶಾಸ್ತ್ರೀಯ ಸಂಗೀತ ಚಿತ್ರಗೀತೆಯ ಜುಗಲ್ಬಂದಿ, ವಾಣಿ ಶಂಕರ್ ಹಾಗೂ ಮಹಮ್ಮದ್ ನವಾಜ್ ಅವರಿಂದ 'ಮಧುರಗಾನ', ಖಾನ್ ಬ್ರದರ್ಸ್ ಹಫೀಸ್ ಖಾನ್ ಮತ್ತು ರಯೀಸ್ ಖಾನ್ ಸೇರಿ 18 ಜನರ ತಂಡದಿಂದ 'ಸಿತಾರ ವಾದನ' ಹಾಗೂ ಪುರಂದರದಾಸರ ಕೀರ್ತನೆಗಳ ಗಾಯನ, ತೇಜಸ್ವಿ ಅನಂತ್ ಅವರಿಂದ 'ಪಿಕ್ಸೆಲ್ ಪಾಯ್' ಎಂ.ಡಿ.ಕೌಶಿಕ್ ಅವರಿಂದ ಮ್ಯಾಜಿಕ್ ಶೋ ಇರಲಿದೆ. ಮೂರು ದಿನವೂ ಬೆಳಗ್ಗೆ ಯೋಗ ಗುರು ಬಿ.ಕೆ.ಎಸ್. ಐಯ್ಯಂಗಾರರ ಅನುಯಾಯಿ ಕೃಷ್ಣಕುಮಾರ್ 'ಯೋಗ ನಾವಿಕ' ನಡೆಸಿಕೊಡಲಿದ್ದಾರೆ.
ನೃತ್ಯ ನಾವಿಕ: ಶಾಸ್ತ್ರೀಯ ಸಂಗೀತ, ಭಾವಗೀತೆ, ಜನಪದ ಗೀತೆಗಳನ್ನಾಧರಿಸಿ ನೃತ್ಯ ಪ್ರದರ್ಶನ ನೀಡಲು 30 ತಂಡಗಳು ಹೆಸರು ನೀಡಿವೆ. ಹಿನ್ನೆಲೆ ಗಾಯಕ ಹೇಮಂತ ತಂಡದಿಂದ 'ಹೇಮಂತ್ ರಾಗ' ಹಾಗೂ ಝೀ ಕನ್ನಡ ಸರಿಗಮಪ ಗಾಯಕರ ತಂಡದಿಂದ 'ಸುರ್ ತರಂಗ್' ಫ್ಯೂಷನ್ ಹಾಡುಗಳು ಹಾಗೂ ಮಹೇಶ್ ರಾಘವನ್ ಹಾಗೂ ಶ್ರವಣ್ ಶ್ರೀಧರ್ ಅವರಿಂದ 'ಸ್ವರಾಲಾಪ' ನಡೆಯಲಿದೆ. ಬೆಂಗಳೂರಿನ ಸಂಸ್ಕೃತಿ ಸೆಂಟರ್ ಫಾರ್ ಪರ್ಫಾರ್ವಿುಂಗ್ ಆರ್ಟ್ಸ್ನ ಸುಚಿತ್ರ ಅಲ್ಕಾನಂದ ಮತ್ತು ತಂಡ 'ದಶಾವತಾರ' ನೃತ್ಯರೂಪಕ, ಪಂಪ ಡ್ಯಾನ್ಸ್ ಅಕಾಡೆಮಿಯ ನಿರ್ಮಲ ಆಧವ ಮತ್ತು ತಂಡಿದಿಂದ 'ನಾಮಸ್ಮರಣೆ'ನೃತ್ಯ ರೂಪಕ ಮತ್ತು ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ನ ಡಾ. ಸುಪರ್ಣಾ ವೆಂಕಟೇಶ್ ತಂಡದಿಂದ ಕತಕ್ನ 'ಉಮಂಗ್' ಫ್ಯೂಷನ್ ನೃತ್ಯ ಇರಲಿದೆ.