ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದಿಂದ ತನ್ನ ದೇಶದ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುವ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಕಾರ್ಯಾಚರಣೆ ಆಗಸ್ಟ್ 31ಕ್ಕೆ ಮುಗಿಯಲಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕಾ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳುವುದನ್ನು ಬೈಡನ್ ಸಮರ್ಥಿಸಿಕೊಂಡರು. ಅಮೆರಿಕಾ ಸೇನಾ ಕ್ರಮಗಳು ಜನರ ಜೀವ ಉಳಿಸಿವೆ ಎಂದು ಅವರು ತಿಳಿಸಿದ್ದಾರೆ.
ತಾಲಿಬಾನ್ ಅಫ್ಘಾನಿಸ್ತಾನದ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷ ಬೈಡನ್ ಈ ಹೇಳಿಕೆ ನೀಡಿದ್ದಾರೆ. 2001 ರ ಸೆಪ್ಟೆಂಬರ್ 11 ರಂದು ನಡೆದ ಉಗ್ರರ ದಾಳಿಯ ನಂತರ ಕಳೆದ ಸುಮಾರು 20 ವರ್ಷಗಳಿಂದ ಅಮೆರಿಕಾ ಸೇನೆ ಅಫ್ಘಾನಿಸ್ತಾನದಲ್ಲಿ ಹೋರಾಡುತ್ತಿದೆ.
2021 ಸೆಪ್ಟೆಂಬರ್ 11 ಗಡುವಿನೊಳಗೆ ಅಮೆರಿಕಾ ಯೋಧರು ಸ್ವದೇಶಕ್ಕೆ ವಾಪಸ್ಸಾಗಬೇಕು ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಈ ವರ್ಷದ ಆರಂಭದಲ್ಲಿ ಗಡುವು ವಿಧಿಸಿದ್ದರು.