ಕಾಸರಗೋಡು: ಕಾಸರಗೋಡು ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ರಾಶಿ ಬಿದ್ದಿರುವ ಕಡತಗಳನ್ನು ತೀರ್ಪುಗೊಳಿಸಲು ಚುರುಕಿನ ಕ್ರಮ ಕೈಗೊಳ್ಳಲಾಗುವುದು. ತುರ್ತು ಸ್ವಭಾವದ ಕಡತಗಳಿಗೆ 31ರ ಮುಂಚಿತವಾಗಿ ತೀರ್ಪು ನೀಡಲಾಗುವುದು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಇತರ ಕಡಗಳ ಬಗ್ಗೆ ತೀರ್ಪು ಕೈಗೊಳ್ಳಲು ಪ್ರತಿತಿಂಗಳ ಕೊನೆಯ ಸೋಮವಾರ ಸಭೆ ಕರೆಯಲಾಗುವುದು. ಕಂದಾಯ ಇಲಾಖೆ ಸಂಬಂಧ ತುರ್ತು ಪರಿಹಾರ ಒದಗಿಸಬೇಕಾದ ಮಂಜೇಶ್ವರ ತಾಲೂಕಿನ 500 ಕಡತಗಳು, ಇತರ ತಾಲೂಕುಗಳ ತಲಾ 1000 ಕಡತಗಳು ಆ.31ರ ಮುಂಚಿತವಾಗಿ ತೀರ್ಪು ಒದಗಿಸಲು ಜಿಲ್ಲಾಧಿಕಾರಿ ಆದೇಶ ನೀಡಿದರು. ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಇಲಾಖೆಗಳಲ್ಲಿ ತುರ್ತು ಪರಿಹರಿಸಬೇಕಿರುವ ಕಡತಗಳ ಕುರಿತಾದ ಮಾಹಿತಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಸಾರ್ವಜನಿಕ ವಲಯಗಳ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು. ನ್ಯಾಯಾಲಯ ಸಂಬಂಧಿ, ಆಡಿಟ್ ಪರಿಶೀಲನೆ ವರದಿ, ಸಿಬ್ಬಂದಿ ಸಮಸ್ಯೆ, ಇನ್ನಿತರ ಅಧಿಕೃತ ಕಡಗಳು ಇತ್ಯಾದಿಗಳ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳಲ್ಲಿ ತೀರ್ಪು ಲಭಿಸದೇ ರಾಶಿ ಬಿದ್ದಿರುವ ಕಡತಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಾಸರಗೋಡು ಜಿಲ್ಲೆಯ ಸರಕಾರಿ ಸಿಬ್ಬಂದಿಯ ಸಂಘಟನೆಗಳ ಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ವಲಯ ಕಂದಾಯಾಧಿಕಾರಿ ಅತುಲ್ ಎಸ್. ನಾಥ್, ಹಣಕಾಸು ಅಧಿಕಾರಿ ಕೆ.ಸತೀಶನ್, ವಿವಿಧ ಇಲಾಖೆಗಳ ಮುಖ್ಯಸ್ಥರು, ವಿವಿಧ ಸೇವಾ ಸಂಘಟನೆ ನೇತಾರರು ಉಪಸ್ಥಿತರಿದ್ದರು.