ಬದಿಯಡ್ಕ: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ 37 ಕೋಟಿ ರೂ. ಯೋಜನೆಗಳ ಸಜ್ಜೀಕರಣ ನಡೆಯಲಿದೆ. ವಸತಿ ಸಂಕೀರ್ಣ(ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್) ಕ್ಕೆ ತಾಂತ್ರಿಕ ಅನುಮತಿ ಲಭಿಸಿದ್ದು, ಜಲ ವಿತರಣೆ ಯೋಜನೆಯ ಟೆಂಡರ್ ಪೂರ್ಣಗೊಂಡಿದೆ.
6600 ಚದರ ಅಡಿ ವಿಸ್ತೀರ್ಣದ, 9 ಅಂತಸ್ತಿನ ಒಂದು ಹೆಣ್ಣುಮಕ್ಕಳ ಹಾಸ್ಟೆಲ್, 4819 ಚದರ ಅಡಿ ವಿಸ್ತೀರ್ಣದ 9 ಅಂತಸ್ತಿನ ಶಿಕ್ಷಕರ ಕ್ವಾರ್ಟರ್ಸ್ ಸಹಿತ ವಸತಿ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಇದಕ್ಕೆ ತಾಂತ್ರಿಕ ಅನುಮತಿ ಲಭಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 8 ಕೋಟಿ ರೂ.ಗೆ ಆಡಳಿತಾನುಮತಿ ಲಭಿಸಿದ್ದು, ಕಾಸರಗೋಡು ಮೆಡಿಕಲ್ ಕಾಲೇಜಿನ ಜಲವಿತರಣೆ ವ್ಯವಸ್ಥೆಯ ಟೆಂಡರ್ ಪೂರ್ಣಗೊಂಡಿದೆ. ಮೆಡಿಕಲ್ ಕಾಲೇಜು ಕಾಂಪಸ್ ಗೆ ಮತ್ತು ಸಮೀಪ ಪ್ರದೇಶಗಳಿಗೆ ಜಲ ವಿತರಣೆ ನಡೆಸುವ ರೀತಿಯ ಯೋಜನೆ ಅಳವಡಿಸಲಾಗಿದೆ. ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ 14 ಕೋಟಿ ರೂ., ಶಿಕ್ಷಕರ ಕ್ವಾರ್ಟರ್ಸ್ ನಿರ್ಮಾಣಕ್ಕೆ 11 ಕೋಟಿ ರೂ. ಮೀಸಲಿರಿಸಲಾಗಿದೆ. ವಸತಿ ಸಂಕೀರ್ಣದ ಹೊರಭಾಗದ ಜಲವಿತರಣೆ, ಡ್ರೈನೇಜ್ ಗಳಿಗೆ 64 ಲಕ್ಷ ರೂ., ಹೆಣ್ಣುಮಕ್ಕಳ ಹಾಸ್ಟೆಲ್ ಗೆ ಜಲವಿತರಣೆಗೆ ಮತ್ತು ಸಾನಿಟೇಷನ್ ಗಳಿಗೆ 68 ಲಕ್ಷ ರೂ., ಶಿಕ್ಷಕರ ಕ್ವಾರ್ಟರ್ಸ್ ನ ಜಲವಿತರಣೆ ಮತ್ತು ಸಾನಿಟೇಷನ್ ಗಳಿಗೆ 74 ಲಕ್ಷ ರೂ. ಮೀಸಲಿರಿಸಲಾಗಿದೆ. ಮೆಡಿಕಲ್ ಶಿಕ್ಷಣ ನಿರ್ದೇಶಕ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಕಿಟ್ಕೋ ಸಂಸ್ಥೆಯ ಮೂಲಕ ಯೋಜನೆ ಜಾರಿಗೊಳ್ಳಲಿದೆ.
ಹೆಣ್ಣುಮಕ್ಕಳ ಹಾಸ್ಟೆಲ್ ನ ಒಂದನೇ ಅಂತಸ್ತಿನಲ್ಲಿ ಅಡುಗೆ ಮನೆ, ಭೋಜನಾಲಯ, ವಿಶ್ರಾಂತಿ ಕೊಠಡಿ, ಸ್ಟೋರ್ ರೂಂ, ರಿಕ್ರಿಯೇಷನ್ ಹಾಲ್, ಸ್ಟಡಿ ರೂಂ, ಅತಿಥಿ ಕೊಠಡಿ, ವಾಷ್ ರೂಂ, ಜಿಂ ಸೌಲಭ್ಯ, ವಿಶಾಲವಾದ ಲಾಂಡ್ ಸ್ಕೇಪ್ ಕಾರ್ಟಿಯಾರ್ಡ್ ಇತ್ಯಾದಿ ಅನಿವಾರ್ಯ ಸೌಲಭ್ಯಗಳು ಇರುವುವು. ಎರಡು ಮತ್ತು ಮೂರನೇ ಅಂತಸ್ತಿನಲ್ಲಿ 21.175 ಚದರ ಅಡಿ ವಿಸ್ತೀರ್ಣದಲ್ಲಿ 2 ಮಂಚಗಳಿರುವ ಕೊಠಡಿ ಮತ್ತು ಶೌಚಾಲಯಗಳು, ಬಟ್ಟೆ ಒಗೆಯುವ ಸೌಲಭ್ಯಗಳು ಇರುವುವು.
9 ಅಂತಸ್ತಿನ ಶಿಕ್ಷಕರ ಕ್ವಾರ್ಟರ್ಸ್ ನಲ್ಲಿ ಮಲಗುವ ಕೊಠಡಿಗಳು, ಶೌಚಾಲಯಗಳು, ಡೈನಿಂಗ್ ಹಾಲ್, ವಿಶ್ರಾಂತಿ ಕೊಠಡಿ, ಅಡುಗೆಮನೆ, ಸ್ಟಾಕ್ ರೂಂ, ಫಯರ್ ರೂಂ, ರಿಕ್ರಿಯೇಷನ್ ಹಾಲ್, ಅತಿಥಿಗಳ ಕೊಠಡಿ, ಲಿಫ್ಟ್ ಸೌಲಭ್ಯ ಇತ್ಯಾದಿ ಅನಿವಾರ್ಯ ಸೌಲಭ್ಯಗಳು ಇರುವುವು.
ಸದ್ರಿ ಜಲವಿತರಣೆ ಯೋಜನೆಯಿಂದ ಒಂದು ಹೆಚ್ಚುವರಿ ಫೀಡರ್ ಲೈನ್ ಸ್ಥಾಪಿಸಿ ಬದಿಯಡ್ಕದಲ್ಲಿರುವ ಮೆಡಿಕಲ್ ಕಾಲೇಜು ಕ್ಯಾಂಪಸ್ ಮತ್ತು ಸಮೀಪ ಪ್ರದೇಶಗಳಿಗೆ ಜಲವಿತರಣೆ ನಡೆಸುವ ರೀತಿಯ ವಾಟರ್ ಸಪ್ಲೈ ಸ್ಕೀಂ ನಿರ್ಮಿಸಲಾಗುವುದು. 0.88 ಎಂ.ಎಲ್.ಡಿ.ಶುದ್ದೀಕರಣ ನಡೆಸಿದ ನೀರು ಮೆಡಿಕಲ್ ಕಾಲೇಜಿಗೆ ವಿತರಣೆ ನಡೆಸಲು 3 ಲಕ್ಷ ಲೀಟರ್ ಸಂಗ್ರಹ ಸಾಮಥ್ರ್ಯದ ರಿಸರ್ವೋಯರ್ ಬದಿಯಡ್ಕ ಮೆಡಿಕಲ್ ಕಾಲೇಜು ಕಾಂಪಸ್ ನಲ್ಲಿ ನಿರ್ಮಿಸಲಾಗುವುದು. 8 ಕೋಟಿ ರೂ.ಮೀಸಲಿರಿಸಿರುವ ಈ ಜಲವಿತರಣೆ ಶಿರಿಯ ನದಿಯನ್ನು ಆಶ್ರಯಿಸಲಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಯೋಜನೆಗೆ ಅಂಗೀಕಾರ ನೀಡಿದೆ. ಭವಿತವ್ಯದಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಂಗೀಕಾರ ಲಭ್ಯತೆ ನಿಟ್ಟಿನಲ್ಲಿ ಕಟ್ಟಡ ಸೌಲಭ್ಯ ಅನಿವಾರ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸದ್ರಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿರುವ ಅಕಾಡೆಮಿಕ್ ಕಟ್ಟಡದಲ್ಲಿ ಕೋವಿಡ್ ಆಸ್ಪತ್ರೆ ಚಟುವಟಿಕೆ ನಡೆಸುತ್ತಿದೆ. 82 ಕೋಟಿ ರೂ. ವೆಚ್ಚದಲ್ಲಿ ನಬಾಡ್ರ್ನ ಆರ್ಥಿಕ ಸಹಾಯದೊಂದಿಗೆ 400 ಹಾಸುಗೆಗಳಿರುವ ಆಸ್ಪತ್ರೆ ಕಟ್ಟಡದ ನಿರ್ಮಾಣ ಚಟುವಟಿಕೆ ತ್ವರಿತ ಗತಿಯಲ್ಲಿ ಪೂರ್ಣಗೊಳ್ಳುತ್ತಿದೆ. ಜೊತೆಗೆ ಮೆಡಿಕಲ್ ಕಾಲೇಜು ಬಳಿಯ ರಸ್ತೆ 10 ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ನಿರ್ಮಿಸಲಾಗಿದೆ. ಮೆಡಿಕಲ್ ಕಾಲೇಜು ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ನ ಟೆಂಡರ್ ಕ್ರಮ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದರು.