ನವದೆಹಲಿ: ಕೋವಿಡ್ ಮಾರ್ಗಸೂಚಿಗಳನ್ನು ಕಡೆಗಣಿಸಿ ಜನರು ದೊಡ್ಡ ಸಂಖ್ಯೆಯಲ್ಲಿ ಗುಂಪು ಸೇರುವ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ), ಮೂರನೇ ಅಲೆಯಲ್ಲಿ ಸೋಂಕು ತೀವ್ರಗತಿಯಲ್ಲಿ ಹರಡಲು ಇಂಥ ಗುಂಪುಗೂಡುವಿಕೆಯೇ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಪ್ರವಾಸ, ಧಾರ್ಮಿಕ ಸ್ಥಳಗಳಿಗೆ ಭೇಟಿ, ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾದರೂ, ಇದಕ್ಕಾಗಿ ಇನ್ನೂ ಕೆಲವು ತಿಂಗಳು ಕಾಯಬಹುದಿತ್ತು ಎಂದು ಐಎಂಎ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದೆ. ವಿಶ್ವದ ಇತರೆಡೆ ಮೂಡಿರುವ ಸ್ಥಿತಿ, ಇತಿಹಾಸ ಗಮನಿಸಿದರೆ ಮೂರನೇ ಅಲೆ ಅನಿವಾರ್ಯವಾಗಿದ್ದು, ಸನ್ನಿಹಿತವೂ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.
ನಿರ್ಣಾಯಕವಾದ ಈ ಸಂದರ್ಭದಲ್ಲಿ ಮೂರನೇ ಅಲೆ ಬಾರದಂತೆ ತಡೆಯಲು ಪ್ರತಿಯೊಬ್ಬರು ಶ್ರಮಿಸಬೇಕು. ದೇಶದ ವಿವಿಧೆಡೆ ಕೋವಿಡ್ ಮಾರ್ಗಸೂಚಿ ಪಾಲಿಸದೇ ಜನರು ಗುಂಪುಗೂಡುವುದು ಕಂಡುಬರುತ್ತಿದೆ. ಧಾರ್ಮಿಕ ಸ್ಥಳಗಳನ್ನು ಜನರ ಭೇಟಿಗೆ ಮುಕ್ತಗೊಳಿಸುವುದು, ಜನರೂ ಲಸಿಕೆ ಪಡೆಯದೇ ಮುಕ್ತವಾಗಿ ಗುಂಪುಗೂಡುವುದು ಮೂರನೇ ಅಲೆಯಲ್ಲಿ ಸೋಂಕು ವೇಗವಾಗಿ ಹಬ್ಬಲು ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಪುರಿಯಲ್ಲಿ ಭಾನುವಾರ ವಾರ್ಷಿಕ ರಥಯಾತ್ರೆ ಆರಂಭವಾಗಿರುವುದು ಹಾಗೂ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕನ್ವರ್ ಯಾತ್ರೆಗೆ ಅನುಮತಿ ನೀಡಲು ಚರ್ಚೆ ನಡೆದಿರುವಂತೆ ವೈದ್ಯರ ಸಂಘಟನೆ ಈ ಹೇಳಿಕೆಯನ್ನು ನೀಡಿದೆ. ದೊಡ್ಡ ಪ್ರಮಾಣದಲ್ಲಿ ಗುಂಪು ಸೇರುವುದನ್ನು ತಡೆಯಬೇಕು ಎಂದು ಐಎಂಎ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.