ನವದೆಹಲಿ: ಭಾರತದಲ್ಲಿ 3ನೇ ಕೋವಿಡ್ ಅಲೆಯು ತಡವಾಗಲಿದೆ. ಕೋವಿಡ್ ಲಸಿಕೆಯನ್ನು ಹೆಚ್ಚಿಸಿದರೆ ಮತ್ತು ಜನರು ಅಗತ್ಯ ನಿಯಮಗಳನ್ನು ಪಾಲಿಸಿದರೆ ಮೊದಲ ಎರಡು ಕೋವಿಡ್ ಅಲೆಗಳಷ್ಟು ಇದು ಪರಿಣಾಮಕಾರಿಯಾಗಿ ಇರುವುದಿಲ್ಲ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ಆಮ್ಲಜನಕ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಯಲ್ಲಿನ ವ್ಯತ್ಯಯದಿಂದ ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸ್ವಾಗತಾರ್ಹ. ಆದರೆ ರಾಷ್ಟ್ರದಲ್ಲಿ ಇನ್ನು ಸುಮಾರು 40 ಕೋಟಿ ಮಂದಿ ದುರ್ಬಲರಾಗಿದ್ದಾರೆ. ಸೆರೊಸರ್ವೆಯಲ್ಲಿ ಶೇಕಡಾ 67ರಷ್ಟು ಮಂದಿಯಲ್ಲಿ ಕೋವಿಡ್ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದು ತಿಳಿದು ಬಂದಿದೆ ಎಂದು ರಣದೀಪ್ ಗುಲೇರಿಯಾ 'ಎನ್‌ಡಿಟಿವಿ'ಗೆ ತಿಳಿಸಿದ್ದಾರೆ.
'ಸಾಂಕ್ರಮಿಕ ಹರಡುವಿಕೆಯನ್ನು ಪರೀಕ್ಷಿಸಲು ಕೋವಿಡ್‌ನ ವರ್ತನೆಯನ್ನು ಗ್ರಹಿಸುವುದು ಮತ್ತು ಅದರ ಮೇಲೆ ಗಮನವಿರಿಸುವುದು ಅಗತ್ಯವಾಗಿದೆ' ಎಂದು ಏಮ್ಸ್ ಮುಖ್ಯಸ್ಥ ಹೇಳಿದ್ದಾರೆ.
3ನೇ ಕೋವಿಡ್ ಅಲೆ ಯಾವಾಗ ಬರುತ್ತದೆ ಎಂಬುದಕ್ಕೆ ನಿಖರತೆ ಇಲ್ಲ. ಭವಿಷ್ಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಮುಖ್ಯವಾಗಿ ನಾವು ಹೇಗೆ ವರ್ತಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ, ಹೆಚ್ಚೆಚ್ಚು ಮಂದಿ ಲಸಿಕೆ ಹಾಕಿಸಿಕೊಂಡಷ್ಟು ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಿದಷ್ಟು 3ನೇ ಅಲೆಯ ಪರಿಣಾಮ ನಿರ್ಣಯವಾಗುತ್ತದೆ. ಆದರೆ ಮೊದಲ ಮತ್ತು ಎರಡನೇ ಅಲೆಯಷ್ಟು ಪರಿಣಾಮ ಬೀರುವುದಿಲ್ಲ ಎಂದು ಗುಲೇರಿಯಾ ವಿವರಿಸಿದ್ದಾರೆ.